ಮಂಜೇಶ್ವರ: ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಪರಿಸರದಿಂದ ಅನಧಿಕೃತವಾಗಿ ಸಾಗಿಸುವ ಮರಳು ಸಾಗಾಟ ತಡೆಗಟ್ಟಲು ಕೂಡಲೇ ಕಠಿನ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.ಈ ಮರಳು ಸಾಗಾಟ ದಂಧೆ ಕೆಲವು ಪೋಲೀಸು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಒತ್ತಾಸೆಯಿಂದ ನಡೆಯುತ್ತಿದೆಯೆಂದು ಅವರು ಆಪಾದಿಸಿದ್ದಾರೆ. ಸಂಬಂಧಪಟ್ಟವರಿಗೆ ಊರವರು ದೂರು ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ಏಕೆ ಎಂದು ಸ್ಪಷ್ಟ ಪಡಿಸಬೇಕೆಂದು ಶ್ರೀಕಾಂತ್ ಆಗ್ರಹಿಸಿದ್ದಾರೆ. ಶುಕ್ರವಾರ ಬಿಜೆಪಿ ನಿಯೋಗದೊಂದಿಗೆ ಆತಂಕಿತ ಪ್ರದೇಶಕ್ಕೆ ಭೇಟಿ ನೀಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತಪಡಿಸಿರುವರು.
ಅನಧಿಕೃತ ಮರಳು ಸಾಗಾಟದಿಂದ ಸುಮಾರು ಮೂರು ಕಿಲೋಮೀಟರಿನಷ್ಟು ರಸ್ತೆ ಹೊಳೆಯಂತೆ ಹೊಂಡವಾಗಿದೆ. ಈ ಪ್ರದೇಶ ಪೂರ್ಣವಾಗಿ ಸಮುದ್ರದ ಪಾಲಾಗುವ ಭೀತಿಯಿದೆ. ಕಡಲತೀರದಲ್ಲಿ ವಾಸಿಸುವವರ ಜೀವ ಹಾಗೂ ಮನೆಗಳಿಗೆ ಹಾನಿಯಾಗಲಿದೆಯೆಂದು ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಈ ಪ್ರದೇಶ ಪೂರ್ತಿ ಸಮುದ್ರ ಪಾಲಾಗಲಿದೆಯೆಂದು ಅವರು ಹೇಳಿದ್ದಾರೆ.
ರಾಜ್ಯ ಮತ್ತು ಪಂಚಾಯತಿ ಆಡಳಿತ ನಡೆಸುವ ಕೆಲವು ರಾಜಕೀಯ ಧುರೀಣರಿಗೂ ಇದರಲ್ಲಿ ಆಮಿಷ ನೀಡುವುದರಿಂದ ಈ ಮಾಫಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಶ್ರೀಕಾಂತ್ ಆರೋಪಿಸಿದ್ದಾರೆ. ಈ ಸಂದರ್ಭ ಅವರು ಸ್ಥಳೀಯ ನಾಗರಿಕರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತರ ಜೊತೆ ಮಂಡಲಾಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಸಮಿತಿ ಸದಸ್ಯ ಎಂ.ಹರೀಶ್ಚಂದ್ರ ಮಂಜೇಶ್ವರ ಮೊದಲಾದವರು ಈ ಪ್ರದೇಶ ಸಂದರ್ಶಿಸಿದ್ದರು.



