ಕುಂಬಳೆ: ಸಣ್ಣ ಪ್ರಾಯದಲ್ಲೇ ರಾಜಕೀಯಕ್ಕೆ ಬಂದು ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ, ನಿಷ್ಠೆಯಿಂದ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿ, ಕೇಂದ್ರ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಓರ್ವ ಮಹಿಳೆ ಅಚಲವಾದ ಬದ್ಧತೆ ಇದ್ದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಸುಷ್ಮಾ ಸ್ವರಾಜ್ ಅವರ ಜೀವನವೇ ಸಾಕ್ಷಿ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ.ಪದ್ಮನಾಭನ್ ಹೇಳಿದರು.
ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಕುಂಬಳೆ ಸಿಟಿ ಹಾಲ್‍ನಲ್ಲಿ ಜರಗಿದ ಕಾರ್ಯಕರ್ತರ ಸಭೆಯಲ್ಲಿ ಅವರು ಸ್ವರಾಜ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಮಂಜೇಶ್ವರ ಮಂಡಲದ ಎಣ್ಮಕಜೆ, ಉಪ್ಪಳದಲ್ಲಿ ಸುಷ್ಮಾ ಸ್ವರಾಜ ಭಾಗವಹಿಸಿದ್ದ ವಿವಿಧ ಕಾರ್ಯಕ್ರಮಗಳ ಬಗ್ಗೆ ಈ ಸಂದರ್ಭ ನೇತಾರರು ನೆನಪಿಸಿ ಕಂಬನಿ ಮಿಡಿದರು. ಮೌನ ಪ್ರಾರ್ಥನೆ ಮಾಡಿ ಸದ್ಗತಿ ಕೋರಲಾಯಿತು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.


