ಮುಳ್ಳೇರಿಯ: ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಆಂದೋಲನ(ಎಲ್.ಸಿ.ಡಿ.ಸಿ.) ಭಾಗವಾಗಿ ಬೆಳ್ಳೂರು ಗ್ರಾ.ಪಂ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ 2ನೇ ಹಾಗೂ ಕೊನೆಯ ಹಂತದ ಅಶ್ವಮೇಧಂ ಕಾರ್ಯಕ್ರಮಕ್ಕೆ ಬುಧವಾರ ಪಂಚಾಯಿತಿ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್ ತರಬೇತಿ ಶಿಬಿರ ಉದ್ಘಾಟಿಸಿ, ಕುಷ್ಠ ರೋಗ ನಿರ್ಮೂಲನೆ ಯಜ್ಞದ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ. ಅಧ್ಯಕ್ಷತೆ ವಹಿಸಿದ್ದರು.
ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಮೇಲ್ವಿಚಾರಕ ಮುರಳೀಧರನ್ ವಿಡಿಯೋ ಸಹಿತ ತರಗತಿ ನೀಡಿದರು. ಬೆಳ್ಳೂರು ಪಂಚಾಯಿತಿ ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ.ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪವಾಜ್ ಮಜೀದ್, ಆರೋಗ್ಯ ಪರಿವೀಕ್ಷಕ ತಿರುಮಲೇಶ್, ಸಿಬ್ಬಂದಿಗಳು, ಕುಟುಂಬಶ್ರೀ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ಸೆ.23ರಿಂದ ಅ.6ರ ತನಕ ನಡೆಯಲಿರುವ ಕುಷ್ಠ ರೋಗ ನಿರ್ಮೂಲನೆ ಆಂದೋಲನದ ಭಾಗವಾಗಿ ತರಬೇತಿ ಪಡೆದ ಸ್ವಯಂಸೇವಕರು, ಆಶಾ, ಕಟುಂಬಶ್ರೀ ಕಾರ್ಯಕರ್ತರು ಗೃಹ ಸಂದರ್ಶನ ನಡೆಸಿ ಕುಷ್ಟ ರೋಗ ಸಾಧ್ಯತೆ ಪತ್ತೆಹಚ್ಚುವ, ರೋಗದಿಂದ ಉಂಟಾಗುವ ಸಮಸ್ಯೆ, ರೋಗ ತಡೆಗಟ್ಟುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲಿದ್ದಾರೆ. ಎರಡು ವರ್ಷ ಪ್ರಾಯ ಮೀರಿದ ಕುಟುಂಬ ಸದಸ್ಯರನ್ನು ಪರಿಶೀಲಿಸಿ, ರೋಗ ಲಕ್ಷಣಗಳು ಕಂಡು ಬಂದಲ್ಲಿ ಹೆಚ್ಚಿನ ಪರಿಶೋಧನೆ ಹಾಗೂ ರೋಗ ನಿರ್ಣಯದ ಬಳಿಕ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು.ಹೊರ ರಾಜ್ಯಗಳ ಕಾರ್ಮಿಕರು, ಕಾಲೊನಿಗಳಲ್ಲಿ ಪ್ರತ್ಯೇಕ ಶಿಬಿರ ಏರ್ಪಡಿಸುವುದಾಗಿ ಆರೋಗ್ಯ ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ.


