ಕುಂಬಳೆ: ಕಿದೂರು ಶ್ರೀ ಮಹಾದೇವ ಶಾಸ್ತಾರ ಕೃಪಾಶ್ರಿತ ಯಕ್ಷಗಾನ ಕಲಾಸಂಘದ ರಜತ ಮಹೋತ್ಸವ ನ.26ರಂದು ಕಿದೂರು ಶ್ರೀಮಹಾದೇವ ದೇವಸ್ಥಾನದ ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆಯಲಿದೆ. ಸಂಘದ ರಜತ ಮಹೋತ್ಸವದಂಗವಾಗಿ ರಾತ್ರಿ 8ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕ್ಷೇತ್ರ ಗುರಿಕ್ಕಾರ ಮಹಾಲಿಂಗ ಭಟ್ ದೀಪಜ್ವಲನ ಮಾಡುವರು. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಆಶೀರ್ವಚನ ನೀಡುವರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ, ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್, ಮರುವಳ ಕೃಷ್ಣ ಭಟ್ ಬಂದ್ಯೋಡು ಅತಿಥಿಗಳಾಗಿ ಭಾಗವಹಿಸುವರು.
ಗುರುವಂದನೆ, ಸನ್ಮಾನ:
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ದೇಂತಡ್ಕ ಮೇಳದ ವೇಷಧಾರಿ ಉಂಡೆಮನೆ ಶ್ರೀಕೃಷ್ಣ ಭಟ್ ಮತ್ತು ಕಿದೂರಿನಲ್ಲಿ ಪುಟಾಣಿ ಮಕ್ಕಳಿಗೆ ಯಕ್ಷಗಾನ ನಾಟ್ಯಭ್ಯಾಸ ಮಾಡಿಸಿ, ಅವರನ್ನು ಪ್ರದರ್ಶನಕ್ಕೆ ಅಣಿಗೊಳಿಸಿದ ನಾಟ್ಯಗುರು ರಾಮ ಸಾಲಿಯಾನ್ ಮಂಗಲ್ಪಾಡಿ ಅವರಿಗೆ ಗುರುವಂದನೆ ನಡೆಯಲಿದೆ. ಬಳಿಕ ಕಟೀಲು ಮೇಳದಲ್ಲಿ ಎರಡೂವರೆ ದಶಕ ತಿರುಗಾಟಗೈದು ಶಾರೀರಿಕ ಸಮಸ್ಯೆಯಿಂದ ಮೇಳತಿರುಗಾಟ ತೊರೆದ ಕಲಾವಿದ ಮಡಂದೂರು ತಿಮ್ಮಪ್ಪ ರೈ ಹಾಗೂ ಪ್ರಸಂಗಕರ್ತ, ಹಿರಿಯ ಹವ್ಯಾಸಿ ಕಲಾವಿದ ಕಂಬಾರು ರಾಮಕೃಷ್ಣಯ್ಯ ಅವರಿಗೆ ಸನ್ಮಾನ ನಡೆಯಲಿದೆ. ಇದೇ ವೇಳೆ ಶ್ರೀಮಹಾದೇವ ಶಾಸ್ತಾರ ಕೃಷಪಾಶ್ರಿತ ಯಕ್ಷಗಾನ ಕಲಾಸಂಘದ ಚಾಲಕ ಶಕ್ತಿಗಳಾಗಿ ದುಡಿದ ಹಿರಿಯ ಕಲಾವಿದರಿಗೆ ರಜತ ಮಹೋತ್ಸವದಂಗವಾಗಿ ಅಭಿನಂದನೆಯೊಂದಿಗೆ ಗೌರವಾರ್ಪಣೆ ನಡೆಯಲಿದೆ.
ಕಾರ್ಯಕ್ರಮ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೇಖರ ಕುಲಾಲ್ ರಜತಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸುವರು. ಶ್ರೀಕ್ಷೇತ್ರ ಆಡಳಿತ ಮೊಕ್ತೇಸರ ರಘುರಾಮ ರೈ ಗೌರವಾಧ್ಯಕ್ಷತೆ ವಹಿಸುವರು. ಕ್ಷೇತ್ರ ಮೊಕ್ತೇಸರ ಶ್ರೀಕೃಷ್ಣ ವಿಶ್ವೇಶ್ವರ ಶರ್ಮ ಅಡಿಗಳ ಮನೆ, ಮೊಕ್ತೇಸರ ಕಠಾರ ಲಕ್ಷ್ಮೀನಾರಾಯಣ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಪಿ. ನರಹರಿ ಮಾಸ್ತರ್ ಶುಭಾಸಂಸನೆ ಮಾಡುವರು.
ಸಂಘದ ಕೋಶಾಧಿಕಾರಿ ವೆಂಕಪ್ಪಶೆಟ್ಟಿ ಮಡಜಾಲು ಸ್ವಾಗತಿಸಿ, ಕಲಾವಿದ ಜಯೇಂದ್ರ ಕುಲಾಲ್ ವಂದಿಸುವರು. ರಾಮ.ಎಂ ನಿರೂಪಿಸುವರು.
ರಂಗಪ್ರವೇಶ- ಬಯಲಾಟ:
ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9.30ರಿಂದ ಸಂಘದ ವತಿಯಿಂದ ಯಕ್ಷಶಿಕ್ಷಣ ಪಡೆದ ಬಾಲಕಲಾವಿದರ ರಂಗಪ್ರವೇಶದ ಸಲುವಾಗಿ 'ಸುದರ್ಶನ ವಿಜಯ' ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾತ್ರಿ 11ರಿಂದ ಸಂಘದ ಹಿರಿಯ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ರಾಮಕೃಷ್ಣಯ್ಯ ಕಂಬಾರು ವಿರಚಿತ "ಪುಂಚದ ಬಾಲೆ" ತುಳು ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

