ಮುಳ್ಳೇರಿಯ: ಗ್ರಾಮೀಣ ಪ್ರದೇಶದ ಜನಸಾಮಾನ್ಯರ ತುರ್ತು ಚಿಕಿತ್ಸೆಗಾಗಿ ಒಂದೂಕಾಲು ಕೋಟಿ ರೂ.ಗಳ ಬೃಹತ್ ಮೊತ್ತ ಬಳಸಿ ನಿರ್ಮಿಸಲಾದ ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಶೀಘ್ರ ಉದ್ಘಾಟಿಸಿ ಜನಸೇವೆಗೆ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಪ್ರಗತಿಪರ ಕೃಷಿಕರಾದ ಕೈಪಂಗಳದ ರಾಜಗೋಪಾಲ ಭಟ್ ಅವರು ಶುಕ್ರವಾರ ಬೆಳ್ಳೂರು ಗ್ರಾ.ಪಂ. ಕಾರ್ಯಾಲಯದ ಎದುರು ಏಕವ್ಯಕ್ತಿ ಪ್ರತಿಭಟನೆ ನಡೆಸಿದರು.
ಕಟ್ಟಡದ ಕಾಮಗಾರಿ ಪೂರ್ತಿಯಾಗಿದ್ದರೂ ಇನ್ನೂ ಉದ್ಘಾಟನೆಗೊಳ್ಳದಿರುವುದನ್ನು ಪ್ರತಿಭಟಿಸಿ ಶುಕ್ರವಾರ ಬೆಳಿಗ್ಗೆ 9 ರಿಂದ ಪ್ರತಿಭಟನೆ ಆರಂಭಿಸಿದರು. ಆದರೆ ಗ್ರಾ.ಪಂ.ಅಧಿಕೃತರು ಪತ್ರದ ಮೂಲಕ ಉದ್ಘಾಟನೆಯ ದಿನಾಂಕದ ಬಗ್ಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವರೆಂದು ತಿಳಿಸಿದ ಮೇರೆಗೆ ಮಧ್ಯಾಹ್ನದ ವೇಳೆ ಪ್ರತಿಭಟನೆ ಕೈಬಿಟ್ಟರು. ಆದರೆ ಈ ತಿಂಗಳಾಂತ್ಯದ ಮೊದಲು ಉದ್ಘಾಟನೆ ನಡೆಸದಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ಭಟ್ ಅವರು ಅಧಿಕೃತರಿಗೆ ಎಚ್ಚರಿಕೆ ನೀಡಿದರು.
ನವಾರ್ಡ್‍ನ ನೆರವಿನೊಂದಿಗೆ 2015 ಮೇ.25 ರಂದು ಆಸ್ಪತ್ರೆ ಕಟ್ಟಡ ನಿರ್ಮಾಣ ಆರಂಭಿಸಲಾಗಿತ್ತು. ಯೋಜನೆಗೆ 1 ಕೋಟಿ 23 ಲಕ್ಷ ರೂ.ಮಂಜೂರಾಗಿತ್ತು. ಕಟ್ಟಡದ ಕಾಮಗಾರಿ ಪೂರ್ತಿಯಾದರೂ ವಿದ್ಯುತ್ತೀಕರಣಕ್ಕೆ ನಿಧಿ ಸಾಕಾಗದೆ ಉದ್ಘಾಟನೆ ನೆನೆಗುದಿಗೆ ಬಿದ್ದಿದ್ದು, ಈ ಬಗ್ಗೆ ಸಮರಸ ಸುದ್ದಿ ಸಮಗ್ರ ವರದಿ ಪ್ರಕಟಿಸಿತ್ತು. ಈ ಮಧ್ಯೆ ನ.26 ರಂದು ರಾಜ್ಯ ಆರೋಗ್ಯ ಸಚಿವ ಇ.ಚಂದ್ರಶೇಖರನ್ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಲು ದಿನ ನಿಗದಿಗೊಂಡಿದೆ ಎಂಬ ಜಿಲ್ಲಾಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಲತಾ ಅವರು ನೀಡಿದ ಮನವಿಯ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ.


