ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ ಶೇ.99 ರಷ್ಟು ಭೂಸ್ವಾಧೀನ ನಡೆದಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಜಿ.ಸುಧಾಕರನ್ ತಿಳಿಸಿದ್ದಾರೆ.
ಕಾಸರಗೋಡು, ಅಡ್ಕತ್ತಬೈಲು ಮತ್ತು ಹೊಸದುರ್ಗ ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಲಾದ ಭೂಮಿಗೆ ನೀಡಲಾದ ಮೊತ್ತ ನಿಶ್ಚಯಿಸಿದ ಪ್ರಮಾಣಕ್ಕಿಂತಲೂ ಹೆಚ್ಚಾಗಿರುವುದನ್ನು ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟಪರಿಹಾರ ಮೊತ್ತವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾ„ಕಾರ ತಡೆ ಹಿಡಿದಿದೆ ಎಂದು ಸಚಿವರು ತಿಳಿಸಿದ್ದಾರೆ. ಸ್ವಾಧೀನಪಡಿಸಲಾದ ಭೂಮಿಗೆ ಬೆಲೆ ನಿಶ್ಚಯಿಸಲು ಉಂಟಾಗಿರುವ ವಿಳಂಬವೇ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಡಚಣೆಯಾಗಿ ನಿಂತಿದೆ ಎಂದು ಸಚಿವರು ಹೇಳಿದ್ದಾರೆ.
ಈ ಯೋಜನೆಯಂತೆ ಭೂಸ್ವಾಧೀನಕ್ಕಾಗಿ ಕೇಂದ್ರ ಸರಕಾರ 557.57 ಕೋಟಿ ರೂ. ಈಗಾಗಲೇ ಮಂಜೂರು ಮಾಡಿದೆ. ಅದರಲ್ಲಿ 320.36 ಕೋಟಿ ರೂ. ವಿತರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ನವೀಕರಣಗೊಂಡ ಬಳಿಕ ಅದರಲ್ಲಿ ಹೊಂಡಗಳು ಉಂಟಾದಲ್ಲಿ ಅದನ್ನು ಆ ಯೋಜನೆಗೆ ಗುತ್ತಿಗೆದಾರರೇ ಸರಿಪಡಿಸಬೇಕೆಂದು ಸಚಿವರು ಇದೇ ವೇಳೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರ ಪ್ರಶ್ನೆಗೆ ಸಚಿವರು ಉತ್ತರಿಸಿ ಮಾಹಿತಿ ನೀಡಿರುವರು.


