ಕುಂಬಳೆ: ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ತಾರಾವರ್ಚಸ್ಸಿನ ಕಲಾವಿದರಾದ ಕುಂಬಳೆ ಸುಂದರರಾವ್ ಮತ್ತು ಕುಂಬಳೆ ಶ್ರೀಧರರಾವ್ ಇವರಿಗೆ ಇದೇ ಮೊದಲಬಾರಿಗೆ ಕುಂಬಳೆ ಬಳಿಯ ಸೂರಂಬೈಲಿನಲ್ಲಿ ಜೂನ್ 23 ರಂದು ಶನಿವಾರ(ನಾಳೆ)ಜಂಟಿಯಾಗಿ ಅಭಿಮಾನಿ ನಾಗರಿಕರಿಂದ ಗೌರವಾಭಿನಂದನೆ ನಡೆಯಲಿದೆ. ಸೂರಂಬೈಲು ಶ್ರೀ ಅಯ್ಯಪ್ಪ ಸ್ವಾಮಿ ಭಜನಾಸಂಘದ ರಜತಮಹೋತ್ಸವ 22ರಂದು ಆರಂಭಗೊಂಡು 24ರ ತನಕ ನಡೆಯಲಿದ್ದು, ಈ ಮಧ್ಯೆ 23ರಂದು ಶನಿವಾರ ರಾತ್ರಿ 9ರಿಂದ ನಡೆಯುವ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯ ಬಯಲಾಟದ ರಂಗಸ್ಥಳದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
ಕರ್ನಾಟಕದ ನಿವೃತ್ತ ಐ.ಎ.ಎಸ್ ಅಧಿಕಾರಿ. ಲೋಕಶಿಕ್ಷಣ ಸೇವಾಟ್ರಸ್ಟ್ ಧರ್ಮದರ್ಶಿ ಡಾ. ಟಿ.ಶ್ಯಾಂ ಭಟ್ ಇವರ ವಿಶೇಷ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನಿತರ ಕುರಿತು ಖ್ಯಾತ ಕಲಾವಿದ ಉಜಿರೆ ಅಶೋಕ ಭಟ್ ಅಭಿನಂದನಾ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್, ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್ ಬೆಳ್ಳಾರೆ ಭಾಗವಹಿಸುವರು. ಮುರಳೀಧರ ಯಾದವ್ ನಾಯ್ಕಾಪು ಅಧ್ಯಕ್ಷತೆ ವಹಿಸುವರು.
ತೆಂಕಣ ಯಕ್ಷಗಾನದಲ್ಲಿ ಕುಂಬಳೆಯ ಹೆಸರನ್ನು ಹೊಂದಿ ವಿಖ್ಯಾತರಾದ ಸುಂದರರಾವ್ ಮತ್ತು ಶ್ರೀಧರರಾವ್ ಅವರಿಗೆ ಹುಟ್ಟೂರಿನಲ್ಲಿ ಒಟ್ಟಾಗಿ ಅಭಿನಂದನೆ ನಡೆಯುತ್ತಿರುವುದು ಇದೇ ಮೊದಲ ಬಾರಿ. ಆಟ-ಕುಟಗಳಲ್ಲಿ ಮಾತಿನಮಲ್ಲರಾಗಿ ಪ್ರಸಿದ್ಧಿ ಹೊಂದಿದ ಸುಂದರರಾಯರು ತಮ್ಮ ವಾಗ್ಝಾಲದ ಮೂಲಕ ಅನೇಕ ಪಾತ್ರಗಳಿಗೆ ಹೊಸ ದೃಷ್ಟಿಯ ಹೊಳಪು ನೀಡಿದ್ದಾರೆ. ಅಸಂಖ್ಯ ಸನ್ನಿವೇಶಗಳನ್ನು ತಮ್ಮ ವಾಚಿಕ ರಸವೈಭವದಿಂದ ಶ್ರೇಷ್ಠಗೊಳಿಸಿದ್ದಾರೆ. ಯಕ್ಷಗಾನದ ಜನಪ್ರಿಯತೆ ಮತ್ತು ಜನಸ್ವೀಕೃತಿಯಿಂದಾಗಿ ಶಾಸಕರಾಗಿ ಆಯ್ಕೆಯಾದ ಏಕೈಕ ಕಲಾವಿದರಾದ ಕುಂಬಳೆ ಸುಂದರರಾಯರ ಜೀವನಗಾಥೆಯಲ್ಲಿ ಕುಂಬಳೆಯ ಯಕ್ಷಗಾನ ವೈಭವಗಳೂ ಒಳಗೊಂಡಿದೆ.
ಇದೇ ರೀತಿ ಕುಂಬಳೆ ನಾಯ್ಕಾಪು ಮೂಲದ ಶ್ರೀಧರರಾಯರು ಆರು ದಶಕದ ತಮ್ಮ ವೃತ್ತಿರಂಗದಲ್ಲಿ ಸ್ತ್ರೀ ಪಾತ್ರಗಳಿಗೆ ಸಮರ್ಥ ನ್ಯಾಯ ಒದಗಿಸಿ, ಗರತಿ ಪಾತ್ರಗಳನ್ನು ರಸೋತ್ಕರ್ಷತೆಯಿಂದ ಭಾವಸಹಿತ ಮೆರೆಸಿದ ಅಪೂರ್ವ ಕಲಾವಿದರು. ಶ್ರೀಧರ್ಮಸ್ಥಳ ಮೇಳದಲ್ಲಿ ಪಾತಾಳ, ಕೋಳ್ಯೂರು ಅವರಂತಹಾ ಪ್ರಬುದ್ಧ ಕಲಾವಿದರು ತೊರೆದ ಮುಖ್ಯ ಸ್ತ್ರೀವೇಷದ ಜಾಗವನ್ನು ಅವರಷ್ಟೇ ಪ್ರತಿಭೆಯಿಂದ ಸಮರ್ಥವಾಗಿ ಸರಿದೂಗಿಸಿದ ಶ್ರೀಧರ ರಾಯರು ಸ್ತ್ರೀವೇಷ, ಪುರುಷವೇಷಗಳಲ್ಲಿ ಸವ್ಯಸಾಚಿ. ಪ್ರಸಕ್ತ 70ರ ಹರೆಯದಲ್ಲಿರುವ ಅವರಿಗೆ ಈ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಯಕ್ಷಸಿರಿ ಪ್ರಶಸ್ತಿ ಘೋಷಿಸಿದೆ.
ಇವರಿಬ್ಬರಿಗೆ ಹತ್ತಾರು ಪ್ರಶಸ್ತಿ, ನೂರಾರು ಸನ್ಮಾನಗಳು ಸಂದಿದ್ದರೂ ಹುಟ್ಟೂರಿನಲ್ಲಿ ಕಲಾಪ್ರೇಮಿಗಳಿಂದ ಜಂಟಿ ಅಭಿನಂದನೆ ಸಲ್ಲುತ್ತಿರುವುದು ಅವರ ಮೇಲಣ ಅಭಿಮಾನಕ್ಕೆ ದ್ಯೋತಕ. ಸಮಾರಂಭದ ಬಳಿಕ ಪ್ರಸಿದ್ಧ ಆಹ್ವಾನಿತ ಅತಿಥಿ ಕಲಾವಿದರಿಂದ "ಲಂಕಾದಹನ-ಇಂದ್ರಜಿತು -ಮಹಿರಾವಣ ಕಾಳಗ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ.


