ಪಣಜಿ:ಸಿನೆಮಾ ಸಾರ್ವತ್ರಿಕ ಮಾಧ್ಯಮ, ಅದಕ್ಕೆ ಭಾಷೆಯ ಗಡಿಯಿಲ್ಲ, ಮಿತಿಯೂ ಇಲ್ಲ ಎಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಚಲನಚಿತ್ರಗಳು ಭಾಷೆಯ ಗಡಿಯನ್ನೂ ದಾಟಿ ಜನರ ಹೃದಯ ತಟ್ಟುವ ಶಕ್ತಿ ಇರುವ ಪ್ರಬಲ ಮಾದ್ಯಮವಾಗಿದೆ ಎಂದು 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಅಯೋಜಿಸಲಾಗಿದ್ದ ಕಲಾ ಅಕಾಡೆಮಿ ಉದ್ಘಾಟಿಸಿ ಹೇಳಿದರು.ಪ್ರತಿಷ್ಠಿತ ದಾದಾ ಸಾಹಿಬ್ ಫಾಲ್ಕೆ ಪ್ರಶಸ್ತಿ ನೀಡಿದ ಸರ್ಕಾರಕ್ಕೆ ಧನ್ಯವಾದ ಹೇಳಿದರು. ನಾನು ಅಂತಹ ಮಾನ್ಯತೆಗೆ ಅರ್ಹನಲ್ಲ ಆದರೂ ಇದನ್ನು ಪ್ರೀತಿ ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದು ಭಾವುಕರಾಗಿ ಹೇಳಿದರು.
ಐಎಫ್ ಎಫ್ ಐ ನ ಸುವರ್ಣ ಮಹೋತ್ಸವದ ಸಮಯದಲ್ಲಿ ತಮಗೆ ಇಂತಹ ಗೌರವ ನೀಡಿರುವುದಕ್ಕಾಗಿ ಅವರು ಸರ್ಕಾರಕ್ಕೆ ಅಭಿನಂದನೆ ಹೇಳಿದರು."ಗೋವಾಕ್ಕೆ ಬರುವುದು ಎಂದರೆ ಮನೆಗೆ ಬರುವಷ್ಟೆ ಸಂತೋಷವಾಗುತ್ತದೆ ಈ ಸ್ಥಳದಲ್ಲಿ ಕೆಲಸ ಮಾಡಲು ಮತ್ತು ಇಲ್ಲಿನ ಜನರ ಆತಿಥ್ಯ ಎಲ್ಲರನ್ನು ಸದಾ ಕಾಲ ಕೈಬೀಸಿ ಕರೆಯುವಂತೆ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಈ ವರ್ಷ, ಚಿತ್ರೋತ್ಸವದ 50 ನೇ ಆವೃತ್ತಿಯಾಗಿದ್ದು ಹಿಂದಿನ ಅವಲೋಕನ, ನಡೆದು ಬಂದ ದಾರಿಯನ್ನು ಇದು ನೆನಪು ಮಾಡಿಕೊಡಲಿದೆ ಜೊತೆಗೆ ಈ ವರ್ಷವೇ ಅಮಿತಾಬ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ . ಚಿತ್ರೋತ್ಸವದಲ್ಲಿ ಅಮಿತಾಬ್ ಬಚ್ಚನ್ ಅಮೋಘ ಅಭಿನಯದ ಆರು ಅತ್ಯುತ್ತಮ ಚಿತ್ರಗಳು ಪ್ರತ್ಯೇಕ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿವೆ.


