ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ಹಾಗೂ ಹೊಸದುರ್ಗದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಕಾನೂನುಸೇವಾ ಅದಾಲತ್‍ನಲ್ಲಿ ಒಟ್ಟು 291 ದೂರುಗಳನ್ನು ಇತ್ಯರ್ಥಪಡಿಸಲಾಯಿತು. ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದ ಕೇಸುಗಳ ಸಹಿತ 818 ಕೇಸುಗಳು ಅದಾಲತ್ ಪರಿಗಣಿಸಿತ್ತು. ಇವುಗಳಲ್ಲಿ 45ಕೇಸುಗಳು ವಾಹನ ಅಪಘಾತ, ಒಂದು ಕೌಟುಂಬಿಕ, 10 ಬ್ಯಾಂಕ್ ಕೇಸುಗಳು ಹಾಗೂ ಇತರ ಪ್ರಕರಣಕ್ಕೆ ಸಂಬಂಧಿಸಿ ಒಂದು ಕೇಸು ಪರಿಗಣನೆಗೆ ಬಂದಿತ್ತು.
ಇದರೊಂದಿಗೆ ಅದಾಲತ್‍ಗೆ ನೇರವಾಗಿ 3410 ದೂರುಗಳು ಪರಿಗಣನೆಗೆ ಬಂದಿತ್ತು.ಇವುಗಳಲ್ಲಿ ಬ್ಯಾಂಕ್‍ಗೆ ಸಂಬಂಧಿಸಿ 175ದೂರು, ಬಿಎಸ್ಸೆನ್ನೆಲ್‍ಗೆ ಸಂಬಂಧಿಸಿ 58, ಇತರ ಎರಡು ದೂರುಗಳ ಸಹಿತ 234ದೂರುಗಳು ಇತ್ಯರ್ಥಪಡಿಸಲಾಯಿತು.
ಕಾಸರಗೋಡು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾಸರಗೋಡು ಮತ್ತು ಹೊಸದುರ್ಗದಲ್ಲಿ ಅದಾಲತ್ ನಡೆಯಿತು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಹಾಗೂ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ. ಅಜಿತ್ ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಮುಜೀಬ್ ರಹಮಾನ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೆಕ್ಷನ್ ಅಧಿಕಾರಿ ದಿನೇಶ್ ಕೊಡಂಗೆ ಅದಾಲತ್‍ಗೆ ನೇತೃತ್ವ ನೀಡಿದರು.

