ಪೆರ್ಲ:ನಿರಂತರ ಕಾಡು ನಾಶದಿಂದ ಹಸಿರು ಹೊದಿಕೆ ಪ್ರಮಾಣ ಕುಸಿದಿದೆ.ಜಾಗತಿಕ ತಾಪಮಾನದಲ್ಲಿ ಏರಿಕೆಯಾಗಿದೆ. ಅಂತರ್ಜಲ ಮಟ್ಟ ಕುಸಿತದಿಂದ ಕುಡಿಯುವ ನೀರಿಗೆ ಹಾಹಾಕಾರ ಕಾಣಿಸಿಕೊಂಡಿದೆ.ಜಾಗತಿಕ ತಾಪಮಾನ ಬದಲಾವಣೆಯ ಆತಂಕ ಇಡೀ ಜಗತ್ತನ್ನು ವ್ಯಾಪಿಸಿದೆ.ಭೂಮಿಯನ್ನು ಉಳಿಸಲು ಹಸಿರು ಹೊದಿಕೆಯ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಕಾಸರಗೋಡು ರೇಂಜ್ ಫಾರೆಸ್ಟ್ ಅಧಿಕಾರಿ ಎನ್.ಅನಿಲ್ ಕುಮಾರ್ ಹೇಳಿದರು.
ಕೇರಳ ವನ, ವನ್ಯಜೀವಿ ಇಲಾಖೆ, ವಾಣೀನಗರ ವನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಸಭಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಸಭೆ, ಮುಂದಿನ 5ವರ್ಷದ ಕ್ರಿಯಾ ಯೋಜನೆ ತಯಾರಿ, ಪಾಲುದಾರಿತ ಗ್ರಾಮ ವಿಶ್ಲೇಷಣೆ ಮತ್ತು ಸಾರ್ವಜನಿಕ ಸಭೆಯಲ್ಲಿ ಮುಖ್ಯ ಭಾಷಣದಲ್ಲಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಪ್ರಕೃತಿಯನ್ನು ಪ್ರೀತಿಸುವ, ರಕ್ಷಿಸುವ, ಉಳಿಸಿ ಬೆಳೆಸುವ ಮನೋಭಾವ ಮೂಡಬೇಕು. ಪರಿಸರ ಕಾಳಜಿಯ ಕೆಲಸ ಮಾಡಿದರೆ ನಾವು ಎದುರಿಸುತ್ತಿರುವ ನಾನಾ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು.ಮುಂದಿನ ತಲೆಮಾರಿಗೆ ಉತ್ತಮ ವಾತಾವರಣವನ್ನು ಕೊಡುಗೆಯಾಗಿ ನೀಡುವ ಪ್ರತಿಜ್ಞೆಯನ್ನು ನಾವು ಕೈಗೊಳ್ಳಬೇಕು.ವನ ಸಂರಕ್ಷಣಾ ಸಮಿತಿಗೆ ಅದರದ್ದೇ ಆದ ಲಕ್ಷ್ಯ ಹಾಗೂ ಜವಾಬ್ದಾರಿ ಇದೆ.ಅರಣ್ಯ ಇಲಾಖೆ, ಹಾಗೂ ಜನರು ಪರಸ್ಪರ ಸಹಕರಿಸಿದಲ್ಲಿ ಸ್ವರ್ಗ ಪರಿಸರವನ್ನು ನಿಜವಾದ ಸ್ವರ್ಗ ಭೂಮಿಯನ್ನಾಗಿ ಪರಿವರ್ತಿಸಬಹುದು ಎಂದರು.
ಎಣ್ಮಕಜೆ ಪಂಚಾಯಿತಿ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ವಾರ್ಡ್ ಸದಸ್ಯೆ ಚಂದ್ರಾವತಿ ಎಂ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವ ಅರಿತು ಅರಣ್ಯ ಸಂರಕ್ಷಣೆ, ಜಲ ಸಂರಕ್ಷಣೆಗೆ ಪಣ ತೊಡಬೇಕು.ಅರಣ್ಯ ಇಲಾಖೆ ವ್ಯಾಪ್ತಿಯ ಸ್ವರ್ಗ ವಾಣೀನಗರ ದೇಶಮೂಲೆ ರಸ್ತೆಯಲ್ಲಿ ಬಾಗಿ ನಿಂತ ಅಪಾಯಕಾರಿ ಮರಗಳನ್ನು ತೆರವು ಗೊಳಿಸುವ ಕ್ರಮ ಕೈಗೊಳ್ಳಬೇಕು.ಅರಣ್ಯ ವ್ಯಾಪಿಯ ಸಾರ್ವಜನಿಕ ರಸ್ತೆ, ಚರಂಡಿ ದುರಸ್ಥಿಗೆ ಕಾನೂನು ಅಡಚಣೆಗಳನ್ನು ಪರಿಹರಿಸಿ ಸಹಕರಿಸಬೇಕು.ಕೃಷಿ ಭೂಮಿಗೆ ವನ್ಯ ಮೃಗಗಳ ದಾಳಿ ತಡೆಗಟ್ಟಲು ಪರಿಹಾರ ಕ್ರಮ ಕೈಗೊಳ್ಳಬೇಕು.ಹಾವು ಕಡಿತ, ಕಾಡು ಪ್ರಾಣಿಗಳ ಆಕ್ರಮಣಕ್ಕೊಳಗಾದವರಿಗೆ ಪರಿಹಾರ ಒದಗಿಸಬೇಕು ಎಂದರು.
ಜಲ, ಪರಿಸರ ತಜ್ಞ ಶ್ರೀಪಡ್ರೆ ಮಾತನಾಡಿ, ಅರಣ್ಯ ಪ್ರದೇಶದ ನಾನಾ ಭಾಗಗಳಿಂದ ಸಾಕಷ್ಟು ಪ್ರಮಾಣದ ನೀರು ಹರಿದು ತೋಡು ಸೇರುತ್ತಿದೆ.ಅರಣ್ಯ ತಪ್ಪಲು ಪ್ರದೇಶದಲ್ಲಿ ಹರಿದು ಬರುವ ನೀರನ್ನು ಗಲ್ಲಿ ಪ್ಲಗ್ ವ್ಯವಸ್ಥೆ ಮೂಲಕ ಅಲ್ಲಲ್ಲಿ ತಡೆದು ನಿಲ್ಲಿಸಿ ನೀರು ಶೇಖರಿಸಿದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ಸಹಕಾರಿಯಾಗುವುದು.ಅರಣ್ಯ ಪ್ರದೇಶದ ಕಚ್ಚಾವಸ್ತು ಬಳಸಿ ಸಣ್ಣ ಮಾನವ ಪ್ರಯತ್ನದಿಂದ ಎತ್ತರದ ಪ್ರದೇಶದಲ್ಲಿ ನೀರು ಇಂಗಿಸುವುದರಿಂದ ತಳಭಾಗದ ಜಲಮೂಲಗಳ ನೀರಿನ ಮಟ್ಟ ಸುಧಾರಿಸುವುದು ಎಂದರು.
ವಾಣೀನಗರ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಯತೀಂದ್ರ ರೈ ಎಂ.ಅಧ್ಯಕ್ಷತೆ ವಹಿಸಿದರು.ವರಯಾಲ್ ಅರಣ್ಯ ಉಪ ವಲಯಾಧಿಕಾರಿ ಎಸ್.ಎನ್.ರಾಜೇಶ್ ಮುಂದಿನ ಯೋಜನೆಯ ಮಾಹಿತಿ ನೀಡಿದರು. ವಿಭಾಗೀಯ ಸಂಯೋಜಕ ಸಿ.ವಿಜಯ ಕುಮಾರ್, ಅರಣ್ಯ ಉಪ ವಲಯಾಧಿಕಾರಿ ಬಿ.ವಿ.ರಾಜಗೋಪಾಲನ್, ಕೆ.ಎನ್.ರಮೇಶನ್, ಶುಭ ಹಾರೈಸಿದರು.ಕ್ರಿಯಾ ಯೋಜನೆ ರೂಪುರೇಷೆ ತಯಾರಿ, ಪ್ರಶ್ನೋತ್ತರ ಕಾರ್ಯಕ್ರಮಗಳು ನಡೆದವು.ನೂತನ ಸಮಿತಿ ರಚಿಸಲಾಯಿತು. ಸೆಕ್ಷನ್ ಅರಣ್ಯ ಅಧಿಕಾರಿ ಬಿನು, ಬೀಟ್ ಅರಣ್ಯ ಅಧಿಕಾರಿ ಫರ್ಝಾನ ಉಪಸ್ಥಿತರಿದ್ದರು.ಸೆಕ್ಷನ್ ಅರಣ್ಯ ಅಧಿಕಾರಿ ಎನ್.ವಿ.ಸತ್ಯನ್ ಸ್ವಾಗತಿಸಿದರು.ವನ ಸಂರಕ್ಷಣಾ ಸಮಿತಿ ಸದಸ್ಯೆ ವಲ್ಸಮ್ಮ ವಂದಿಸಿದರು.
ಅಭಿಮತ:
'ಇಲಾಖೆ ಹಾಗೂ ಜನರು ಪರಸ್ಪರ ಸಹಕರಿಸಿದಲ್ಲಿ ವಾಣೀನಗರ ಪ್ರದೇಶ ಪ್ರಾಕೃತಿಕ ಸಂಪನ್ಮೂಲಗಳ ನೈಜ ಸ್ವರ್ಗವಾಗುವುದು.ಜನರು ನೀರು, ಮಣ್ಣಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು.ಪ್ಲಾಸ್ಟಿಕ್ ಬಳಕೆ, ಎಲ್ಲೆಂದರಲ್ಲಿ ಎಸೆಯುವುದು, ಉರಿಸುವುದು ನಿಲ್ಲಿಸಬೇಕು. ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗುವ ಸ್ವರ್ಗ ವಾಣೀನಗರ ದೇಶಮೂಲೆ ರಸ್ತೆಯಲ್ಲಿ ಅಪಾಯ ಸಾಧ್ಯತೆಯ ಮರ ಹಾಗೂ ರೆಂಬೆಗಳನ್ನು ತೆರವು ಗೊಳಿಸುವ ಕ್ರಮ ಕೈಗೊಳ್ಳಲಾಗುವುದು'
- ಎನ್.ಅನಿಲ್ ಕುಮಾರ್
ಕಾಸರಗೋಡು ರೇಂಜ್ ಫಾರೆಸ್ಟ್ ಅಧಿಕಾರಿ


