ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಜಿಲ್ಲಾಸಮಿತಿಯ ನೇತೃತ್ವದಲ್ಲಿ ಪಿಂಚಣಿದಾರರ ದಿನಾಚರಣೆಯನ್ನು ಬದಿಯಡ್ಕ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯಾಲಯದಲ್ಲಿ ಬುಧವಾರ ಆಚರಿಸಲಾಯಿತು. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಬದಲಾದ ಸನ್ನಿವೇಶದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ನಮ್ಮ ಶಾಲೆಗಳಲ್ಲಿ ಕಡಿಮೆಗೊಳಿಸಬೇಕು. ಶಾಲೆಗಳಲ್ಲಿ ರಾಜಕೀಯವನ್ನು ತುರುಕುವುದು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ವಿದ್ಯಾರ್ಥಿಗಳ ಹಿತವನ್ನು ಕಾಪಾಡುವುದಕ್ಕೋಸ್ಕರ ಅಧ್ಯಾಪಕರೊಂದಿಗೆ ಹೆತ್ತವರು ಸಹಕಾರ ಮನೋಭಾವದಿಂದ ವರ್ತಿಸಬೇಕು ಎಂದರು.
ಪಿಂಚಣಿದಾರರ ಕಾಸರಗೋಡು ಜಿಲ್ಲಾ ಅಧ್ಯಕ್ಷ ಎಂ.ಈಶ್ವರ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪೆನ್ಶನರ್ಸ್ ದಿನಾಚರಣೆಯ ವಿಚಾರಗಳನ್ನು ತಿಳಿಸಿದರು. ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀಧರ ಭಟ್, ಜಿಲ್ಲಾ ಕೋಶಾಧಿಕಾರಿ ಕರುವಜೆ ಕೇಶವ ಭಟ್, ಪಿ. ಕೇಶವ ಭಟ್, ಕೃಷ್ಣ ಕೊರಕ್ಕೋಡು, ಗುಣಾಜೆ ಶಿವಶಂಕರ ಭಟ್, ಸೀತಾರಾಮ ಕುಂಜತ್ತಾಯ ಶುಭಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ಪಿಂಚಣಿದಾರರಾದ ಪುರುಷೋತ್ತಮ ಭಟ್ ಅಗಲ್ಪಾಡಿ, ಲಿಂಗಪ್ಪ ಮಂಗಲ್ಪಾಡಿ, ಕೃಷ್ಣ ಕುಂಜತ್ತಾಯ ಬೊಳಿಂಜ, ರಾಘವನ್ ನಾಯರ್, ಸುಬ್ರಹ್ಮಣ್ಯ ಭಟ್ ಕಿಳಿಂಗಾರು ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಜಿಲ್ಲಾ ಕಾರ್ಯದರ್ಶಿ ಅರವಿಂದ ಕುಮಾರ ಅಲೆವೂರಾಯ ಸ್ವಾಗತಿಸಿ, ಮೈರ್ಕಳ ನಾರಾಯಣ ಭಟ್ ವಂದಿಸಿದರು. ಪಿ.ಸೀತಾರಾಮ ರಾವ್ ಕಾರ್ಯಕ್ರಮ ನಿರೂಪಿಸಿದರು. ವಿಶಾಲಾಕ್ಷಿ ಕುಳಮರ್ವ, ಅನ್ನಪೂರ್ಣ, ಜಯಶ್ರೀ ಪಿ. ಪ್ರಾರ್ಥನೆ ಹಾಡಿದರು.


