ಕಾಸರಗೋಡು: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬ್ಯಾಂಕ್ಗಳ ಮೂಲಕ 2020-21 ಆರ್ಥಿಕ ವರ್ಷದಲ್ಲಿ ನಬಾರ್ಡ್ 5,276 ಕೋಟಿ ರೂ. ಸಾಲ ಸಾಧ್ಯತೆ ಯೋಜನೆ ಜಾರಿಗೊಳಿಸಲಿದೆ. ಇದರಲ್ಲಿ 3,350 ಕೋಟಿ ರೂ.(ಶೇ 63) ಕೃಷಿ ವಲಯಕ್ಕೆ, ಶೇ 18 ಸೂಕ್ಷ್ಮ-ಕಿರು-ಮಧ್ಯಮ ಉದ್ದಿಮೆಗಳಿಗೆ, ಶೇ 13 ವಸತಿ ಸಾಲ, ಶೇ 4 ಶಿಕ್ಷಣ ಸಾಲ, ಶೇ 2 ಇತರ ಆದ್ಯತೆ ಸಾಲಗಾರರಿಗೆ ವಿತರಿಸಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಅವಲೋಕನ ಸಭೆಯಲ್ಲಿ ಈ ವಿಚಾರ ತಿಳಿಸಲಾಯಿತು.
ನಬಾರ್ಡ್ ಸಿದ್ಧಪಡಿಸಿರುವ ಸಾಲ ಸಾಧ್ಯತೆ ಯೋಜನೆಯ ರೂಪುರೇಷೆಯನ್ನು ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ ಅವರು ಬಿಡುಗಡೆಗೊಳಿಸಿದರು. ಮೊದಲ ಪ್ರತಿಯನ್ನು ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧ ಎನ್.ಕಣ್ಣನ್ ಪಡೆದುಕೊಮಡರು. ಕೃಷಿ, ಸೂಕ್ಷ್ಮ-ಕಿರು-ಮಧ್ಯಮ ಉದ್ದಿಮೆಗಳು, ವಸತಿ, ಶಿಕ್ಷಣ ಸಾಲಗಳು ಇತ್ಯಾದಿಗಳನ್ನು ಆದ್ಯತೆ ವಲಯದಲ್ಲಿರುವ ನೂತನ ಮತ್ತು ಸೃಜನಾತ್ಮಕ ರೀತಿ ವಿತರಣೆ ನಡೆಸುವ ನಿಟ್ಟಿನಲ್ಲಿ ಯೋಜನೆಯ ರೂಪುರೇಷೆಯ ಪ್ರತಿಗಳನ್ನು ಬ್ಯಾಂಕ್ ಗಳಿಗೆ, ವಿವಿಧ ಸರಕಾರ ಕಚೇರಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಲಾಯಿತು.
ನಬಾರ್ಡ್ ಎ.ಜಿ.ಎಂ. ಜ್ಯೋತಿಷ್ ಜಗನ್ನಾಥ್, ರಿಸರ್ವ್ ಬ್ಯಾಂಕ್ ಎ.ಜಿ.ಎಂ.ಪಿ.ವಿ.ಮನೋಹರನ್, , ಜಿಲ್ಲಾ ಸಹಕಾರಿ ಬ್ಯಾಂಕ್ ಡಿ.ಜಿ.ಎಂ. ಕೆ.ರಾಜನ್, ಕೇರಳ ಗ್ರಾಮೀಣ ಬ್ಯಾಂಕ್ ರೀಜನಲ್ ಮೆನೆಜರ್ ಎಸ್.ಎನ್.ಬಾಪ್ಟಿ, ವಿವಿಧ ಬ್ಯಾಂಕ್, ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


