ಕಾಸರಗೋಡು: ತಿರುವನಂತಪುರದಿಂದ ಕಾಸರಗೋಡಿಗೆ ಕೇವಲ ನಾಲ್ಕು ತಾಸು ಕಾಲಾವಧಿಯಲ್ಲಿ ತಲುಪುವ ಅತಿವೇಗದ ಸಿಲ್ವರ್ ಲೈನ್ ರೈಲ್ವೆ ಹಳಿ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವಾಲಯ ಹಸಿರುನಿಶಾನಿ ತೋರಿಸಿದೆ. ಇದರೊಂದಿಗೆ ಯೋಜನೆಗಾಗಿ ಮೊತ್ತ ಸಂಗ್ರಹ ಕಾರ್ಯದೊಂದಿಗೆ ಮುಂದುವರಿಯಲು ತಾತ್ವಿಕ ಒಪ್ಪಿಗೆ ನೀಡಿದೆ. ತಿರುವನಂತಪುರದಿಂದ ಕಾಸರಗೋಡಿಗೆ ಪ್ರಸಕ್ತ ರೈಲಿಗೆ 12ತಾಸುಗಳ ಕಾಲಾವಕಾಶ ತಗಲುತ್ತಿದ್ದು, ಅತಿವೇಗ ರೈಲ್ವೆ ಯೋಜನೆ ಜಾರಿಗೊಂಡಲ್ಲಿ ಎಂಟು ತಾಸುಗಳ ಉಳಿತಾಯವಾಗಲಿದೆ.
ಭಾರತೀಯ ರೈಲ್ವೆ ಹಾಗೂ ಕೇರಳ ಸರ್ಕಾರ ಜಂಟಿಯಾಗಿ ರಚಿಸಿರುವ'ಕೆಆರ್‍ಡಿಸಿಎಲ್'ಮೂಲಕ ಯೋಜನೆ ಜಾರಿಯಾಗಲಿದೆ. ತಾಸಿಗೆ 200ಕಿ.ಮೀ ವೇಗದಲ್ಲಿ ಸಂಚರಿಸಬಹುದಾದ ರೀತಿಯಲ್ಲಿ ಎರಡು ರೈಲ್ವೆ ಹಳಿಗಳ ನಿರ್ಮಾಣವಾಗಲಿದೆ. ರಾಜ್ಯ ಸಚಿವ ಸಂಪುಟ ಯೋಜನೆಗೆ ಅಂಗೀಕಾರ ನೀಡಿದ ನಂತರ ಕೇಂದ್ರಕ್ಕೆ ರವಾನಿಸಲಾಗಿತ್ತು. ಒಟ್ಟು 532ಕಿ. ಮೀ ಉದ್ದದ ರೈಲ್ವೆ ಹಳಿ ನಿರ್ಮಾಣವಾಗಲಿದೆ.
ಯೋಜನೆಗೆ 56443 ಕೋಟಿ ರೂ. ಅಂದಾಜಿಸಲಾಗಿದ್ದರೂ, ಯೋಜನೆ ಪೂರ್ತಿಗೊಳ್ಳಲು 66079ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯದ 11ಜಿಲ್ಲೆಗಳ ಮೂಲಕ ಸಿಲ್ವರ್ ಲೈನ್ ರೈಲ್ವೆ ಹಳಿ ಹಾದುಹೋಗಲಿದ್ದು, 50ಸಾವಿರ ಮಂದಿಗೆ ಉದ್ಯೋಗಾವಕಾಶವನ್ನೂ ನೀಡಲಿದೆ. ಜಾಗವಶಪಡಿಸಿಕೊಳ್ಳುವುದನ್ನು ಕಡಿಮೆಮಾಡಲು ಹಾಗೂ ಖರ್ಚು ಕಡಿತಗೊಳಿಸುವ ನಿಟ್ಟಿನಲ್ಲಿ ನಗರ ಪ್ರದೇಶಗಳಲ್ಲಿ ಮೇಲ್ಸೇತುವೆ ನಿರ್ಮಿಸಿ ಹಳಿ ನಿರ್ಮಾಣಕಾರ್ಯ ನಡೆಸಲಾಗುವುದು. ರೋರೋ ಸರ್ವೀಸ್, ವಿದ್ಯುತ್ ವಾಹನಗಳು, ಪಾರ್ಕಿಂಗ್ ವ್ಯವಸ್ಥೆ ಮುಂತಾದುವುದಗಳು ಯೋಜನೆಯಲ್ಲಿ ಒಳಪಡಲಿದೆ. ಒಟ್ಟು ಯೋಜನೆ ಹಸಿರು ಸಂಹಿತೆಯನ್ವಯ ಜಾರಿಗೊಳ್ಳಲಿದೆ.
ಈ ಬಗ್ಗೆ ತಿರುವನಂತಪುರದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇರಳದ ಅಭಿವೃದ್ಧಿಗೆ ಸೆಮಿಹೈಸ್ಪೀಡ್ ರೈಲ್ವೆ ಹಳಿನಿರ್ಮಾಣ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ. ಭಾರತೀಯ ರೈಲ್ವೆ ಮತ್ತು ಕೇರಳ ಸರ್ಕಾರ ಜಂಟಿಯಾಗಿ ಯೋಜನೆಯನ್ನು ಜಾರಿಗೊಳಿಸಲಿದೆ. ಇದಕ್ಕಾಗಿ ಅಗತ್ಯ ಮೊತ್ತ ಕಂಡುಕೊಂಡು ಯೋಜನೆ ಶೀಗ್ರ ಜಾರಿಗೆ ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ.


