ಮಧೂರು: ಮಧೂರು ಪಟ್ಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪರಿಸರ ಕ್ಲಬ್ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಾಟಿ ವೈದ್ಯಕೀಯಕ್ಕೆ ಸಂಬಂಧಿಸಿ ನೂರಾರು ಮಾಹಿತಿಗಳನ್ನು ಅತ್ತರ್ ವೈದ್ಯರೆಂದೇ ಕರೆಸಿಕೊಂಡಿರುವ ಮೇಲ್ಪರಂಬ ಮರವಯಲಿನ ಮೊಹಮ್ಮದ್ ನೀಡಿದರು.
ಶಾಲಾ ಪರಿಸರದಲ್ಲಿ ಔಷಧಿ ತೋಟ ನಿರ್ಮಾಣ, ಔಷಧಿ ಸಸ್ಯಗಳ ಹೆಸರು, ಅವರ ಪ್ರಯೋಜನ ಮೊದಲಾದವುಗಳ ಬಗ್ಗೆ ವಿವರಿಸಿದರು.
ಪರಿಸರ ಸಂರಕ್ಷಣೆ ಯಜ್ಞ, ಪ್ರಕೃತಿಯ ವಿಶೇಷತೆಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ಎಲ್ಲರಿಗೆ ಇದೆ ಎಂದು ಅವರು ಕಾರ್ಯಕ್ರಮದಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಕೆ.ಪ್ರಶಾಂತ್ ಸುಂದರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅವರು ಅತ್ತರ್ ವೈದ್ಯರ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಪಟ್ಲ ಸಾರ್ವಜನಿಕ ಲೈಬ್ರರಿಗೆ ಶಾಲಾ ಅಧ್ಯಾಪಿಕೆ ಪಿ.ಟಿ.ಉಷಾ ಅವರು ನೀಡಿದ ಪುಸ್ತಕಗಳನ್ನು ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲತಿ ಸುರೇಶ್ ಸ್ವೀಕರಿಸಿ ವಾರ್ಡ್ ಸದಸ್ಯ ಮಜೀದ್ ಅವರಿಗೆ ಹಸ್ತಾಂತರಿಸಿದರು. ವಾರ್ಡ್ ಸದಸ್ಯ ಎ.ಎ.ಮಜೀದ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಚ್.ಕೆ.ಅಬ್ದುಲ್ ರಹಿಮಾನ್, ಶಾಲಾ ಸಮಿತಿ ಅಧ್ಯಕ್ಷ ಸಿ.ಎಚ್.ಅಬೂಬಕ್ಕರ್, ಅಧ್ಯಾಪಕ ಎ.ಪವಿತ್ರನ್ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮ ಸಂಯೋಜಕಿ ಪಿ.ಟಿ.ಉಷಾ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಪ್ರದೀಪ್ ಕುಮಾರ್ ವಂದಿಸಿದರು. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸ್ಥಾಪನೆ ದಿನಾಚರಣೆಯಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಬಹುಮಾನ ವಿತರಿಸಿದರು.


