ಬದಿಯಡ್ಕ: ರಾಷ್ಟ್ರೀಯ ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಬೆಂಬಲಿಸಿ ಸಂಘಪರಿವಾರದ ನೇತೃತ್ವದಲ್ಲಿ ಬುಧವಾರ ಸಂಜೆ ಬದಿಯಡ್ಕದಲ್ಲಿ ಬೃಹತ್ ರ್ಯಾಲಿ ನಡೆಯಿತು. ವಂದೇಮಾತರಂ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳು ಮೆರವಣಿಗೆಯಲ್ಲಿ ಮೊಳಗುತ್ತಿತ್ತು. ಇಲ್ಲಿನ ಗಣೇಶಮಂದಿರದಿಂದ ಆರಂಭಗೊಂಡ ಮೆರವಣಿಗೆಯು ಬದಿಯಡ್ಕ ಮೇಲಿನ ಪೇಟೆ, ಪ್ರಧಾನವೃತ್ತ, ಕೆಡೆಂಜಿ ತಿರುವು ತನಕ ಸಂಚರಿಸಿ ಬಸ್ ನಿಲ್ದಾಣ ಸಮೀಪ ಸಮಾಪನಗೊಂಡಿತು. ಮೆರವಣಿಗೆಯುದ್ದಕ್ಕೂ ದಾರಿ ಮಧ್ಯೆ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.
ಬಸ್ ನಿಲ್ದಾಣದ ಪರಿಸರದಲ್ಲಿ ನೇತಾರ ಸುನಿಲ್ ಪಿ.ಆರ್. ಮಾತನಾಡಿ ರಾಷ್ಟ್ರದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರಕಾರವು ಪೌರತ್ವ ಕಾಯ್ದೆಗೆ ತಿದ್ದುಪಡಿಯನ್ನು ತರುವ ಮೂಲಕ ಭಾರತ ದೇಶದ ಜನತೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿ ಜನರು, ಪಕ್ಷಗಳು ದೇಶದ ಜನತೆಯ ದಾರಿತಪ್ಪಿಸುವ ಕೆಲಸದಲ್ಲಿ ನಿರತರಾಗಿರುವುದು ಖಂಡನೀಯ. ವಂದೇಮಾತರಂ ಹಾಡಲು ಹಿಂದೇಟು ಹಾಕುವ ಜಿಹಾದಿಗಳಿಗೆ ನಾವು ಹೆದರುವುದಿಲ್ಲ. ನಮ್ಮ ದೇಶದ ಕಾನೂನಿಗೆ ಗೌರವವನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು. ನೇತಾರರಾದ ಹರೀಶ್ ನಾರಂಪಾಡಿ, ಎಂ.ಸುಧಾಮ ಗೋಸಾಡ, ಮಹೇಶ್ ವಳಕ್ಕುಂಜ, ಅವಿನಾಶ್ ರೈ, ಸುಕುಮಾರ ಕುದ್ರೆಪ್ಪಾಡಿ, ಹರೀಶ್ ಗೋಸಾಡ, ನ್ಯಾಯವಾದಿ ಗಣೇಶ್ ಬಿ, ಶಿವಕೃಷ್ಣ ಭಟ್, ಮೈರ್ಕಳ ನಾರಾಯಣ ಭಟ್, ಲಕ್ಷ್ಮೀನಾರಾಯಣ ಪೈ, ಕೃಷ್ಣ ಮಣಿಯಾಣಿ ಮೊಳೆಯಾರು, ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಬಿ.ರಾಜೇಶ್ ಶೆಟ್ಟಿ, ಶಶಿಧರ ತೆಕ್ಕೆಮೂಲೆ, ರಾಜೇಶ್ ಪೈಕ, ಮಾಧವ ಮಾಸ್ಟರ್ ಮಧೂರು, ಜಯಂತಿ, ರಜನಿ ಸಂದೀಪ್ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಭದ್ರತಾ ದೃಷ್ಟಿಯಿಂದ ನೂರಾರು ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು.


