ಬದಿಯಡ್ಕ: ಕಾಸರಗೋಡು ಕೃಷಿಕರ ಮಾರುಕಟ್ಟೆ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ನೀರ್ಚಾಲು ಪ್ರಧಾನ ಕಚೇರಿಯಲ್ಲಿ ಶನಿವಾರ ಜರಗಿತು. ಸಹಕಾರಿ ಇಲಾಖೆಯ ಸಹಾಯಕ ನೊಂದಣಾಧಿಕಾರಿ(ಜನರಲ್) ಕಾಸರಗೋಡು ಜಯಚಂದ್ರನ್ ಅವರು ಉಪಸ್ಥಿತರಿದ್ದು, ಮಾತನಾಡಿ ಮಾರ್ಕೆಟಿಂಗ್ ಸೊಸೈಟಿಗಳು ಆರ್ಥಿಕ ಲಾಭವನ್ನು ಮಾತ್ರ ಪರಿಗಣಿಸದೆ ಕೃಷಿಕರಿಗೆ ಬೇಕಾದ ಎಲ್ಲಾ ಅಗತ್ಯ ಸೇವೆಗಳನ್ನು ಪೂರೈಸುವಲ್ಲಿ ಮುತುವರ್ಜಿಯನ್ನು ವಹಿಸಬೇಕು. ಕಳೆದ ಕೆಲವು ವರ್ಷಗಳಿಂದ ನೀರ್ಚಾಲಿನ ಈ ಸಂಸ್ಥೆಯ ಇಂತಹ ಸೇವೆಯಿಂದಾಗಿ ಕಾಸರಗೋಡು ಜಿಲ್ಲೆಯಲ್ಲಿಯೇ ನಂ.1 ಮಾರ್ಕೆಟಿಂಗ್ ಸೊಸೈಟಿಯಾಗಿ ಹೊರಹೊಮ್ಮಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಅಪ್ಪಣ್ಣ ಬಿ.ಎಸ್. ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.
ಸರ್ಕಾರವು ಕೃಷಿಕರಿಗೆ ನೀಡುವಂತಹ ಸಬ್ಸಿಡಿ ಗೊಬ್ಬರಗಳನ್ನು ಸಹಕಾರೀ ಸಂಘಗಳ ಮುಖಾಂತರವೇ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುವಂತೆ ಸರ್ವಾನುಮತದ ಅಂಗೀಕಾರದೊಂದಿಗೆ ಠರಾವು ಮಂಡಿಸಲಾಯಿತು. ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ವಿ.ಶ್ರೀಕೃಷ್ಣ ಭಟ್, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ಮಾಜಿ ಅಧ್ಯಕ್ಷ ಕೋರಿಕ್ಕಾರು ವಿಷ್ಣು ಭಟ್, ಅಧ್ಯಕ್ಷ ಜಯದೇವ ಖಂಡಿಗೆ, ಸಾಮಾಜಿಕ ಕಾರ್ಯಕರ್ತರುಗಳಾದ ಎಂ.ಎಚ್.ಜನಾರ್ಧನ, ವಾಮನ ಆಚಾರ್ಯ ಬೋವಿಕ್ಕಾನ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ನಿರ್ದೇಶಕರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ನಿರ್ದೇಶಕರುಗಳಾದ ಕುಳಮರ್ವ ಗಣಪತಿಪ್ರಸಾದ ಸ್ವಾಗತಿಸಿ, ರಾಮಕೃಷ್ಣ ಹೆಬ್ಬಾರ್ ವಂದಿಸಿದರು. ಧರಣಿ ಸರಳಿ ಪ್ರಾರ್ಥನೆ ಹಾಡಿದಳು.


