ಕುಂಬಳೆ: ಧಾರ್ಮಿಕ ಸಹಿಷ್ಣುತೆ ಹಾಗೂ ಸಾಂಸ್ಕøತಿಕ ಸಹನೆ ಎಂಬ ಎರಡು ಉತ್ತಮ ಗುಣಗಳು ನಮ್ಮಲ್ಲಿ ಇದ್ದರೆ ಖಂಡಿತವಾಗಿಯೂ ಪ್ರತಿಯೊಬ್ಬರನ್ನೂ ನಾವು ನಮ್ಮ ಸಹೋದರ - ಸಹೋದರಿಯರಂತೆ ಕಾಣಲು ಸಾಧ್ಯ ಹಾಗೂ ಅವರ ವದನಗಳಲ್ಲಿ ದೇವರ ಸ್ವರೂಪವನ್ನು ನೋಡಲು ಶಕ್ತರಾಗುತ್ತೇವೆ ಎಂದು ಫಾ.ಮೆಲ್ವಿನ್ ಫೆರ್ನಾಂಡಿಸ್ ಹೇಳಿದರು.
ಅವರು ಪೆರ್ಮುದೆ ಸೈಂಟ್ ಲಾರೆನ್ಸ್ ಯೂತ್ ಕ್ಲಬ್‍ನ ಆಶ್ರಯದಲ್ಲಿ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯ ಮೈದಾನದಲ್ಲಿ ಬುಧವಾರ ರಾತ್ರಿ ನಡೆದ ಕ್ರಿಸ್ಮಸ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ರಿಸ್ಮಸ್ ಹಬ್ಬ ಎಂದರೆ ಕೇವಲ ಸಿಹಿ ಹಂಚಿ ಸಂಭ್ರಮಿಸುವುದು ಮಾತ್ರವಲ್ಲ, ಅದು ಜಗತ್ತಿನಾದ್ಯಂತ ಶಾಂತಿ, ಸಮಾಧಾನವನ್ನು ಹರಡುವ ಒಂದು ಮಹತ್ವದ ಘಟನೆ ಎಂದರೆ ತಪ್ಪಾಗಲಾರದು. ಯೇಸು ತಮ್ಮ ಜೀವನದುದ್ದಕ್ಕೂ ಪರರಿಗೆ ಒಳ್ಳೆಯದನ್ನೇ ಮಾಡಿದರು ಹಾಗೂ ನಾವೂ ಅದೇ ಸೇವಾ ಮನೋಭಾವವನ್ನು ಹೊಂದಬೇಕು ಎಂಬ ಸಂದೇಶವನ್ನು ನೀಡಿದರು. ಆದ್ದರಿಂದ ಪ್ರತಿವರ್ಷ ಕ್ರಿಸ್ಮಸ್ ಹಬ್ಬ, ಯೇಸು ನೀಡಿದ ಸಂದೇಶವನ್ನು ಸ್ಮರಣೆಗೆ ತಂದು ನಮ್ಮ ಸುತ್ತಮುತ್ತಲಿನ ಜನರಿಗೆ ಅದರಲ್ಲೂ ಅಸಹಾಯಕರಿಗೆ, ದೀನರಿಗೆ, ದುರ್ಬಲ ವರ್ಗದವರಿಗೆ ನಮ್ಮ ಕೈಲಾದಷ್ಟು ಸಹಾಯ ನೀಡಲು, ಪ್ರತಿಯೊಬ್ಬರೊಂದಿಗೆ ಸಾಮರಸ್ಯದಿಂದ ಇರಲು, ಶಾಂತಿದೂತರಾಗಿ ಬಾಳಲು ಕರೆ ನೀಡಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಇಸ್ಮಾಯಿಲ್ ಮಾಸ್ತರ್ ಸೂರಂಬೈಲು ಮಾತನಾಡಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಒಂದೇ ವೇದಿಕೆಯಲ್ಲಿ ಒಂದೇ ಮುಹೂರ್ತದಲ್ಲಿ ಕೇಕ್ ತುಂಡರಿಸಿ ಪರಸ್ಪರ ಹಂಚಿ ತಿನ್ನುವ ಈ ದೃಶ್ಯ ಭಾರತದ ಪರಂಪರೆಯನ್ನು ತೋರಿಸುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ವಸಂತ ಪೈ ಬದಿಯಡ್ಕ ಮಾತನಾಡಿ, ವಿಷ್ಣು, ಅಲ್ಲಾಹು, ಯೇಸು ಎಲ್ಲದರ ಅರ್ಥ ಸರ್ವಶಕ್ತ ಎಂಬುದಾಗಿದೆ. ಭಗವಂತನ ಶಕ್ತಿ ಬೇರೆ ಅಲ್ಲ. ಭಗವತಿಯ ಶಕ್ತಿ ಬೇರೆ ಅಲ್ಲ. ಎಲ್ಲವೂ ಸರ್ವಶಕ್ತ ಎಂದರು. ಜೀವ ಮತ್ತು ಆತ್ಮ ಸೇರಿದಾಗ ಪರಮಾತ್ಮ. ಈ ಪರಮಾತ್ಮನ ರೂಪದಲ್ಲಿ ಭಗವಂತ ನಮ್ಮ ಅಂತರಾಳದಲ್ಲಿ ನೆಲೆಸುತ್ತಾನೆ ಎಂದರು.
ಪೈವಳಿಕೆ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಕೆ.ಅಮೀರ್, ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯೆ ಶಾಂತಿ ಪ್ರಭಾ ಡಿ'ಸೋಜ ಶುಭಾಶಂಸನೆಗೈದರು. ಉದ್ಯಮಿ ನವೀನ್ ರಂಜಿತ್ ಡಿ'ಸೋಜ, ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯ ಸಹಾಯಕ ಧರ್ಮಗುರು ಸುನಿಲ್ ಲೋಬೊ, ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡೆನಿಸ್ ಡಿ'ಸೋಜ, ಕಾರ್ಯದರ್ಶಿ ಜೋನ್ ಡಿ'ಸೋಜ ಓಡಂಗಲ್ಲು, ಸೈಂಟ್ ಲಾರೆನ್ಸ್ ಯೂತ್ ಕ್ಲಬ್ ಅಧ್ಯಕ್ಷ ಪ್ರಸನ್ನ ಡಿ'ಸೋಜ ಉಪಸ್ಥಿತರಿದ್ದರು. ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯ ಪಾಲನಾ ಸಮಿತಿ ಕಾರ್ಯದರ್ಶಿ ಜೋನ್ ಡಿ'ಸೋಜ ಓಡಂಗಲ್ಲು ಸ್ವಾಗತಿಸಿ, ಸೈಂಟ್ ಲಾರೆನ್ಸ್ ಯೂತ್ ಕ್ಲಬ್ ಕಾರ್ಯದರ್ಶಿ ರೋಹಿತ್ ಡಿ'ಸೋಜ ಚನ್ನಿಕೋಡಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪರಿಸರದ ಮಕ್ಕಳು ಹಾಗೂ ಯುವ ಜನರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು. ಬಳಿಕ ಮಂಗಳೂರಿನ ಕೆ.ಕೆ.ನೌಶಾದ್ ಹಾಗೂ ತಂಡದ ಶಾಡ್ಸ್ ಮ್ಯೂಸಿಕ್ ವಲ್ರ್ಡ್‍ನ ಕಲಾವಿದರಿಂದ ಗಾನಮೇಳ ನಡೆಯಿತು.


