ಬದಿಯಡ್ಕ: ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರದ ರಜತ ಸಂಭ್ರಮ ಸಮಾರಂಭವು ಶುಕ್ರವಾರ ಆರಂಭಗೊಂಡಿತು. ಅಯ್ಯಪ್ಪ ನಾಮಸ್ಮರಣೆಯೊಂದಿಗೆ ನೂರಾರು ವ್ರತಧಾರಿಗಳು ಹಾಗೂ ಅಯ್ಯಪ್ಪ ಭಕ್ತಾದಿಗಳು ಮೆರವಣಿಗೆಯಲ್ಲಿ ಫಲವಸ್ತುಗಳನ್ನು ಕೈಯಲ್ಲಿ ಹಿಡಿದು ಭಕ್ತಿಭಾವಗಳೊಂದಿಗೆ ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳು ಮುತ್ತು ಕೊಡೆಗಳನ್ನು ಹಿಡಿದು ಚೆಂಡೆಯ ನಾದದೊಂದಿಗೆ ಹೆಜ್ಜೆಹಾಕಿ ಮೆರವಣಿಗೆಗೆ ಶೋಭೆಯನ್ನು ತಂದರು. ಕೆಡೆಂಜಿ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಮೆರವಣಿಗೆಯು ಬದಿಯಡ್ಕ ಪೇಟೆಯಲ್ಲಿ ಸಾಗಿ ನೀರ್ಚಾಲು ಪೇಟೆಯ ಮೂಲಕ ಮಾನ್ಯ ಶ್ರೀ ಅಯ್ಯಪ್ಪ ಭಜನ ಮಂದಿರಕ್ಕೆ ಆಗಮಿಸಿ, ಮಧ್ಯಾಹ್ನ ಚುಕ್ಕಿನಡ್ಕ ಶ್ರೀ ಮಂದಿರಕ್ಕೆ ತಲುಪಿ ಉಗ್ರಾಣ ಮುಹೂರ್ತ ನೆರವೇರಿಸಲಾಯಿತು. ಹಿರಿಯ ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಮಂದಿರದ ಗೌರವಾಧ್ಯಕ್ಷ ಗೋಪಾಲಕೃಷ್ಣ ಪೈ ಬದಿಯಡ್ಕ, ಶ್ರೀ ಮಂದಿರದ ಕುಂಞÂಕಣ್ಣ ಗುರುಸ್ವಾಮಿ, ಬ್ಲಾಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ, ವೆಂಕಪ್ಪ ನಾಯ್ಕ ಮಾನ್ಯ, ಮಹೇಶ್ ವಳಕ್ಕುಂಜ, ಚಂದ್ರಶೇಖರ ಚುಕ್ಕಿನಡ್ಕ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಬದಿಯಡ್ಕ ಪೇಟೆಯ ವ್ಯಾಪಾರಿಗಳು ಕಾಣಿಕೆಯನ್ನು ಸಮರ್ಪಿಸಿದರು.
ಇಂದಿನ (ಡಿ.21) ಕಾರ್ಯಕ್ರಮಗಳು:
ಪ್ರಾತಃಕಾಲ 5 ಗಂಟೆಗೆ ದೀಪಪ್ರತಿಷ್ಠೆ, ಶರಣಂ ವಿಳಿ, 6 ಗಂಟೆಗೆ ಗಣಪತಿ ಹೋಮ, ಬೆಳಗ್ಗೆ 8ರಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, 10 ಗಂಟೆಗೆ ಕೊಂಡೆವೂರು ಸದ್ಗುರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರವರ ಆಗಮನ, ಪೂರ್ಣಕುಂಭ ಸ್ವಾಗತ, ಸಭಾಕಾರ್ಯಕ್ರಮದ ಉದ್ಘಾಟನೆ, ಆಶೀರ್ವಚನ ನಡೆಯಲಿದೆ. ಉತ್ಸವ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಪೈ ಅಧ್ಯಕ್ಷತೆಯನ್ನು ವಹಿಸಲಿರುವರು. ಡಿ.ಎನ್.ಮಾನ್ಯ ಕಾರ್ಕಳ ಧಾರ್ಮಿಕ ಭಾಷಣ ಮಾಡಲಿರುವರು. ಹಿರಿಯರಾದ ಅರ್ಚಕ ಸುಬ್ರಹ್ಮಣ್ಯ ಭಟ್ ಕಂಬಾರು, ಕೇರಳ ರಾಜ್ಯಮಟ್ಟದ ಅತ್ಯುತ್ತಮ ವೈದ್ಯ ಪ್ರಶಸ್ತಿ ಪುರಸ್ಕøತ ಡಾ. ಜನಾರ್ಧನ ನಾಯ್ಕ್, ಎಂ.ಎ.ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ವಂದನಾ ಸಿ.ಎಚ್. ಇವರಿಗೆ ಗೌರವಾರ್ಪಣೆ ನಡೆಯಲಿದೆ. ಜನಪ್ರತಿನಿಧಿಗಳಾದ ಕೆ.ಎನ್.ಕೃಷ್ಣಭಟ್, ನ್ಯಾಯವಾದಿ ಕೆ.ಶ್ರೀಕಾಂತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಶ್ಯಾಮಪ್ರಸಾದ ಮಾನ್ಯ, ಅವಿನಾಶ್ ರೈ, ರಾಜೇಶ್ವರಿ ಮಾನ್ಯ, ಧ.ಗ್ರಾ.ಯೋಜನೆಯ ಚೇತನಾ ಎಂ., ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ಜಯದೇವಖಂಡಿಗೆ, ಶಶಿಧರ ಶೆಟ್ಟಿ ಕಾಸರಗೋಡು, ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಶುಭಾಶಂಸನೆಗೈಯಲಿರುವರು. ಮಧ್ಯಾಹ್ನ ಮಹಾಪೂಜೆ, ಅನ್ನದಾನ. 1.30ರಿಂದ ರಂಗಸಿರಿ ಸಾಂಸ್ಕøತಿ ವೇದಿಕೆ ಬದಿಯಡ್ಕ ಇದರ ವಿದ್ಯಾರ್ಥಿಗಳಿಂದ ಸಂಸ್ಕøತಿ ಸಿರಿ ವೈಭವದಲ್ಲಿ ಯಕ್ಷಗಾನ ಹಾಗೂ ಭಕ್ತಿಭಾವ ಸಂಗಮ, ಸಂಜೆ 5 ಗಂಟೆಗೆ ತಾಯಂಬಕ, 6 ಗಂಟೆಗೆ ಹುಲ್ಪೆ ಮೆರವಣಿಗೆ, ಪಾಲೆಕೊಂಬು ಮೆರವಣಿಗೆ ದೇವರಕೆರೆ ಶ್ರೀ ರಕ್ತೇಶ್ವರೀ ಪರಿವಾರ ದೈವಗಳ ಸನ್ನಿಧಿಯಿಂದ ಹೊರಡುವುದು. ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕಲ್ಲಡ್ಕ ಶಿಲ್ಪ ಗೊಂಬೆ ಬಳಗ, ಮುತ್ತುಕೊಡೆ, ಸಿಂಗಾರಿ ಮೇಳ, ವಾದ್ಯಘೋಷಗಳಿರುವುದು. 6.30ರಿಂದ ಭಜನೆ, ರಾತ್ರಿ 10 ಗಂಟೆಗೆ ಮಹಾಪೂಜೆ, ಅನ್ನದಾನ. 10.45ರಿಂದ ಜೂನಿಯರ್ ಜೇಸುದಾಸ್ ಖ್ಯಾತಿಯ ರತೀಶ್ ಕಂಡಡ್ಕಂ ಮುನ್ನಡೆಸುವ `ದೇವಗೀತಂ' ಭಕ್ತಿಗಾನಮೇಳ, ನಾಡನ್ ಪಾಟ್ಟ್‍ಗಳ ಮೇಘಾ ಶೋ, ರಾತ್ರಿ 2.30ರಿಂದ ಅಯ್ಯಪ್ಪನ್ ಗೀತೆ, ಬೇಟೆವಿಳಿ, ತಾಲಪ್ಪೊಲಿ, ಅಗ್ನಿಪೂಜೆ, ಬೆಳಗಿನ ಜಾವ ತಿರಿಉಯಿಚ್ಚಿಲ್, ಅಯ್ಯಪ್ಪನ್ ವಾವರ ಯುದ್ಧ, ಅಯ್ಯಪ್ಪನ್ ತಿರುವಿಳಕ್ಕ್ ಹಾಗೂ 5 ಗಂಟೆಗೆ ದೀಪೋದ್ವಾಸನದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.


