HEALTH TIPS

ಮಂಗಳೂರಲ್ಲಿ ಪತ್ರಕರ್ತರ ಬಂಧನ-ಕೆಜೆಯು ಜಿಲ್ಲಾ ಘಟಕದಿಂದ ಪ್ರತಿಭಟನೆ-ಮೆರವಣಿಗೆ

           
          ಕುಂಬಳೆ: ವಾರ್ತಾ ಮಾಧ್ಯಮಗಳ ವಿರುದ್ದ ರಾಷ್ಟ್ರಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಪೋಲೀಸ್ ಬಲ ಬಳಸಿ ನಿಯಂತ್ರಿಸುವ ಹುನ್ನಾರ ನಡೆಯುತ್ತಿದೆ. ಶುಕ್ರವಾರ ಮಂಗಳೂರಲ್ಲಿ ಕೇರಳದ ಮಾಧ್ಯಮ ಪ್ರತಿನಿಧಿಗಳನ್ನು ಯಾವುದೇ ಕಾರಣಗಳಿಲ್ಲದೆ ಬಂಧಿಸಿರುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗಕ್ಕೆ ಎಸಗಿರುವ ವಂಚನೆಯಾಗಿದೆ ಎಮದು ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು)ಕೇರಳ ರಾಜ್ಯ ಘಟಕದಚ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಕೆ.ನಾಝರ್ ಅವರು ತಿಳಿಸಿದರು.
         ಮಂಗಳೂರಲ್ಲಿ ಶುಕ್ರವಾರ ಕೇರಳದ ಪತ್ರಕರ್ತರನ್ನು ಬಂಧಿಸಿದ ಘಟನೆಯನ್ನು ಖಂಡಿಸಿ ಕೆಜೆಯು ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಶನಿವಾರ ಕುಂಬಳೆ ಪೇಟೆಯಲ್ಲಿ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಕುಂಬಳೆ ಬಸ್ ನಿಲ್ದಾಣ ಪರಿಸರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
         ಸಮಾಜದ ನೆಮ್ಮದಿಯನ್ನು ಕಾಪಿಡುವಲ್ಲಿ, ನೈಜ ಘಟನಾವಳಿಗಳನ್ನು ಜನರಿಗೆ ತಲಪಿಸುವಲ್ಲಿ ಮಾಧ್ಯಮಗಳ ವಸ್ತುನಿಷ್ಠ ವರದಿಗಾರಿಕೆ ಪ್ರಧಾನ ಕಾರಣವಾಗಿರುತ್ತದೆ. ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳು ಹಾದಿ ತಪ್ಪಿದಾಗ ಸ್ಪಷ್ಟತೆಯೊಂದಿಗೆ ನ್ಯಾಯದೊರಕಿಸಲು ಸುದ್ದಿ ಮಾಧ್ಯಮಗಳು ಸಮರೋಪಾದಿಯಲ್ಲಿ ಎಂದಿಗೂ ಕಾರ್ಯಾಚರಿಸಿವೆ. ಆದರೆ ಮಂಗಳೂರಲ್ಲಿ ಆಗಿರುವ ಕಹಿ ಘಟನೆಯಿಂದ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನ ನಡೆದಿರುವುದು ಖಚಿತವಾಗಿದ್ದು, ಈ ನಿಟ್ಟಿನಲ್ಲಿ ಜನವಂಚನೆಗೆ ಪೋಲೀಸರು ಮುಂದಾಗಿರುವುದು ಖಂಡನಾರ್ಹ ಎಂದು ಅವರು ತಿಳಿಸಿದರು.
       ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಕೆಜೆಯು ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಉಳುವಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಫ್ರಭುತ್ವದ ಸಂರಕ್ಷಕರಾದ ಸುದ್ದಿಮಾಧ್ಯಮಗಳ ವರದಿಗಾರರಿಗೆ ಸಂರಕ್ಷಣೆಗೆ ನೀಡಲು ಕರ್ನಾಟಕ ಸರ್ಕಾರ ಮುಂದಾಗಬೇಕು. ಮಾಧ್ಯಮ ಸ್ವಾತಂತ್ರ್ಯ ಹರಣ ಹಾಗೂ ಅವುಗಳ ಮೇಲಿನ ಆಘಾತಗಳು ಸಮಾಜವನ್ನು ಗೊಂದಲಗೊಳಿಸಿ ಅಸುರಕ್ಷಿತತೆಗೆ ಕಾರಣವಾಗುವುದೆಂದು ಅವರು ತಿಳಿಸಿದರು.
       ಜಿಲ್ಲಾ ಘಟಕದ ಜೊತೆ ಕಾರ್ಯದರ್ಶಿ ಪುರುಷೋತ್ತಮ ಭಟ್, ಜಿಲ್ಲಾ ಸಮಿತಿ ಸದಸ್ಯರಾದ ರವೀಂದ್ರನ್ ಕೊಟ್ಟೋಡಿ, ಲತೀಫ್ ಕುಂಬಳೆ ಮೊದಲಾದವರು ಮಾತನಾಡಿದರು. ಕೆಜೆಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ರಾಜಪುರಂ ಸ್ವಾಗತಿಸಿ, ಐ.ಮೊಹಮ್ಮದ್ ರಫೀಕ್ ವಂದಿಸಿದರು. ಕುಂಬಳೆ ಪ್ರೆಸ್‍ಪೋರಂ ಪರಿಸರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕುಂಬಳೆ ಪೇಟೆ, ದೇವಾಲಯ ರಸ್ತೆ, ಮಾರುಕಟ್ಟೆ ಮೂಲಕ ಸಂಚರಿಸಿ ಬಸ್ ನಿಲ್ದಾಣ ಪರಿಸರದಲ್ಲಿ ಸಮಾರೋಪಗೊಂಡಿತು. ವಿವಿಧ ಮಾಧ್ಯಮಗಳ ವರದಿಗಾರರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries