ಮಂಜೇಶ್ವರ: ಮಂಜೇಶ್ವರ ಗ್ರಾಮಪಂಚಾಯತಿ ಹೊಸಬೆಟ್ಟು ಕೊಪ್ಪಳ ಕುಂಟುಕೊಳಕ್ಕೆ ತೋಡನ್ನು ಶುಚೀಕರಣ ನಡೆಸಲಾಯಿತು.
ಹರಿತ ಕೇರಳಂ ಮಿಷನ್ ನ ಮೂರನೇ ವಾರ್ಷಿಕೋತ್ಸವ ಅಂಗವಾಗಿ ಜಾರಿಗೊಳಿಸುವ "ನಾನು ಹರಿಯಲೇ?" ಯೋಜನೆ ಸಲುವಾಗಿ ಈ ಶುಚೀಕರಣ ಜರುಗಿತು. ಸಮೃದ್ಧ ಜಲವಿದ್ದ ಈ ತೋಡಿನಲ್ಲಿ ತ್ಯಾಜ್ಯ ತುಂಬಿಕೊಂಡ ಪರಿಣಾಮ ನೀರಿನ ಹರಿಯುವಿಕೆ ಮೊಟಕುಗೊಂಡು ತೋಡು ವಿನಾಶದ ಅಂಚಿನಲ್ಲಿತ್ತು. ತೋಡು ಪೂರ್ಣ ದುಗರ್ಂಧದಿಂದ ತುಂಬಿಕೊಂಡಿತ್ತು. ಇದೀಗ 2 ಕಿಮೀ ಸುತ್ತಳೆತೆಯಲ್ಲಿ ತೋಡಿನ ಶುಚೀಕರಣ ನಡೆಸಲಾಗಿದೆ. ಮಂಜೇಶ್ವರ ಗ್ರಾಮಪಂಚಾಯತಿಯ ನೇತೃತ್ವದಲ್ಲಿ ನೌಕರಿ ಖಾತರಿ ಯೋಜನೆ ಕಾರ್ಮಿಕರು ಶುಚೀಕರಣ ನಡೆಸಿದರು.
ಕಾರ್ಯಕ್ರಮ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೆರವಣಿಗೆ ನಡೆಯಿತು. ಗ್ರಾಮ ಪಂಚಾಯತಿ ಕಚೇರಿ ಬಳಿಯಿಂದ 16,18 ವಾರ್ಡ್ ಗಳ ಮೂಲಕ ತೋಡಿನ ವರೆಗೆ ಮೆರವಣಿಗೆ ಸಾಗಿ ಬಂತು. ಜನಪ್ರತಿನಿಧಿಗಳು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು, ಕುಟುಂಬಶ್ರೀ ಕಾರ್ಯಕರ್ತರು, ನೌಕರಿ ಖಾತರಿ ಯೋಜನೆ ಕಾರ್ಮಿಕರು, ಸಾಮಾಜಿಕ ಕಾರ್ಯಕರ್ತರು, ಪಂಚಾಯತಿ ಸಿಬ್ಬಂದಿ ಮೊದಲಾದವರು ಇದ್ದರು.
ಚಲನಚಿತ್ರ ತಾರೆ ರೂಪಶ್ರೀ ವರ್ಕಾಡಿ ಕಾಮಗಾರಿಗೆ ಚಾಲನೆ ನೀಡಿದರು. ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಜ್ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಗ್ರಾಮಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಎಂ.ಕೆ.ಅಬ್ದುಲ್ ರಹಮಾನ್ ಹಾಜಿ, ಜನಪ್ರತಿನಿಧಿಗಳು, ಪಂಚಾಯತಿ ಕಾರ್ಯದರ್ಶಿ ಎನ್.ಬಿ.ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿ ಗ್ರಾಮ ಪಂಚಾಯತಿ ಮಟ್ಟದ ಕನಿಷ್ಠ ಒಂದು ಜಲಾಶಯವನ್ನು ಪುನಶ್ಚೇತನಗೊಳಿಸುವ ಮೂಲಕ ಸಮಗ್ರ ಜಲಸಂರಕ್ಷಣೆ, ಕೃಷಿ ವಿಸ್ತರಣೆ ಇತ್ಯಾದಿ ನಡೆಸುವುದು ಯೋಜನೆಯ ಉದ್ದೇಶವಾಗಿದೆ. ವಿವಿಧ ರೀತಿಯ ಜನಪರ ಒಕ್ಕೂಟಗಳ ಮೂಲಕ ಈ ಕಾಯಕ ನಡೆಯಲಿದೆ. ಗ್ರಾಮ ಪಂಚಾಯತಿ ಸದಸ್ಯರು, ಜನಪ್ರತಿನಿಧಿಗಳು, ನೌಕರಿ ಖಾತರಿ ಯೋಜನೆ ಕಾರ್ಮಿಕರು, ಕುಟುಂಬಶ್ರೀ ಕಾರ್ಯಕರ್ತರು, ಹರಿತ ಕ್ರಿಯಾ ಸೇನೆ ಸದಸ್ಯರು, ಸ್ವಯಂ ಸೇವಾ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಮೊದಲಾದವರು ಈ ಕಾಯಕಕ್ಕೆ ಹೆಗಲು ನೀಡಲಿದ್ದಾರೆ.


