ಧಾರವಾಡ: ಇದೇನು ವಿಜ್ಞಾನವೋ, ಪವಾಡವೋ, ತಟ್ಟೆಯ ಮೇಲೆ ಮೂರು ಗಂಟೆ ಕಾಲ ನೆಟ್ಟಗೆ ನಿಂತಿದ್ದ ಒನಕೆ ಗ್ರಹಣ ಮುಗಿದ ಕೂಡಲೇ ಕೆಳಗೆ ಬಿದ್ದಿದೆ! ಹೌದು, ಗ್ರಹಣದಿನದಂದು ಒನಕೆಯನ್ನು ತಟ್ಟೆಯ ಮೇಲೆ ನಿಲ್ಲಿಸಿದರೆ ನಿಲ್ಲುತ್ತದೆ ಎಂಬುದು ನಂಬಿಕೆ. ಅದರಂತೆ ಹಲವರು ಈ ಪ್ರಯೋಗ ಗ್ರಹಣ ದಿನವಾದ ನಿನ್ನೆ ಹಲವೆಡೆ ನಡೆಸಿರುವುದು ತಿಳಿದುಬಂದಿದ್ದು, ಭಾರೀ ವೈರಲ್ ಆಗಿದೆ. ಜೊತೆಗೆ ಈ ಪ್ರಯೋಗ ಯಶಸ್ವಿಯೂ ಆಗಿದೆ.
ಧಾರವಾಡ, ಮಂಗಳೂರು, ಕಲಬುರ್ಗಿ, ಮಂಗಳೂರು, ಕರಾವಳಿಯ ಹಲವು ಗ್ರಾಮಗಳು ಇನ್ನೂ ಹಲವು ಕಡೆ ಗ್ರಾಮಗಳಲ್ಲಿ ಜನರು ತಟ್ಟೆಯಲ್ಲಿ ನೀರು ಹಾಕಿ ಅದರಲ್ಲಿ ಒನಕೆ ನಿಲ್ಲಿಸಿದ್ದಾರೆ. ತಟ್ಟೆಯಲ್ಲಿ ಒನಕೆ ನಿಲ್ಲಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಗ್ರಹಣ ದಿನದಂದು ಗ್ರಹಣ ಇರುವಷ್ಟೂ ಹೊತ್ತು ತಟ್ಟೆಯಲ್ಲಿ ಒನಕೆ ನಿಲ್ಲುತ್ತದೆ ಎಂಬುದು ನಂಬಿಕೆ. ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಟ್ಟೆ ಮೇಲೆ ನಿಲ್ಲಿಸಲ್ಪಟ್ಟಿದ್ದ ಒನಕೆ ಗ್ರಹಣ ಮುಗಿಯುವ ಹೊತ್ತಿಗೆ ಮೆಲ್ಲಗೆ ಅಲುಗಾಡಿ ಧುಪ್ಪೆಂದು ನೆಲಕ್ಕೆ ಬಿದ್ದಿರುವುದು ಕಂಡುಬಂದಿದೆ.
ಗ್ರಹಣ ಪ್ರಾಕೃತಿಕ ಘಟನೆಯಷ್ಟೆ ಅದರ ಪರಿಣಾಮ ಭೂಮಿಯ ಮೇಲೆ ಏನೂ ಇರದು ಎಂದು ವಿಜ್ಞಾನಿಗಳು ಬಹುಕಾಲದಿಂದ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಆದರೆ ತಟ್ಟೆಯ ಮೇಲೆ ಒನಕೆ ನಿಲ್ಲುವ, ಗ್ರಹಣ ಸಮಯದ ನಂತರ ಒನಕೆ ತನ್ನಂತಾನೆ ಕೆಳಗೆ ಬಿದ್ದ ವಿದ್ಯಮಾನ ಗ್ರಹಣ ಒಳಗೊಂಡ ಕೌತುಕಗಳನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಗ್ರಹಣಕ್ಕೆ ವೈಜ್ಞಾನಿಕ ಆಯಾಮ ಬಿಟ್ಟು ಬೇರೆಯ ಆಯಾಮಗಳೂ ಇವೆಯೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.


