ಬದಿಯಡ್ಕ: ಕೇರಳ ದಿನೇಶ್ ಬೀಡಿ ಕಂಪೆನಿಗೆ ದೊಡ್ಡ ಇತಿಹಾಸವಿದೆ. 70ರ ಕಾಲಘಟ್ಟದಿಂದಲೇ ಅನೇಕ ಮಂದಿಯ ಕುಟುಂಬಕ್ಕೆ ಆಧಾರವಾದ ಈ ಸಂಸ್ಥೆಗೆ ಭವಿಷ್ಯವಿದೆ ಎಂದು ಹೇಳಲು ಸಾಧ್ಯವಿಲ್ಲ. ತಂಬಾಕು ಉತ್ಪನ್ನಗಳ ಸೇವನೆಯಿಂದ ಮಾರಕ ರೋಗಗಳು ಅಂಟಿಕೊಳ್ಳುತ್ತವೆ ಎಂಬುದು ವಾಸ್ತವ ಸಂಗತಿಯಾಗಿದ್ದು, ಸಾರ್ವಜನಿಕ ರಂಗದಲ್ಲಿ ಚರ್ಚೆಯಾದ ವಿಚಾರವಾಗಿದೆ. ಬೀಡಿ ಕಾರ್ಮಿಕರು ಸಂಘಟನಾ ಚತುರರಾಗಿದ್ದು, ಕೇರಳದ ರಾಜಕೀಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಕೇರಳ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಹೇಳಿದರು.
ಕೇರಳ ದಿನೇಶ್ ಬೀಡಿ, ಬೀಡಿ ಕಾರ್ಮಿಕರ ವ್ವವಸಾಯ ಸಹಕಾರಿ ಸಂಘದ 50ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದಿರುವ ಅನೇಕರನ್ನು ಮೇಲೆತ್ತುವಲ್ಲಿ ಕೇರಳ ದಿನೇಶ್ ಬೀಡಿ ಉದ್ದಿಮೆಯು ಪ್ರಧಾನ ಪಾತ್ರವನ್ನು ವಹಿಸಿದೆ. ಕಣ್ಣೂರು ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು 1960ರಿಂದ 70ರ ಕಾಲಘಟ್ಟದಲ್ಲಿ ತಮ್ಮ ಮನೆಗಳಲ್ಲಿ ಬೀಡಿ ವ್ಯವಸಾಯವನ್ನು ಮಾಡಿಕೊಂಡಿದ್ದರು. ಹಿಂದಿನ ಕಾಲಘಟ್ಟದಲ್ಲಿ ರೂಪೀಕೃತವಾದ ದಿನೇಶ್ ಬೀಡಿಯು ವ್ಯವಸಾಯ ರಂಗದಲ್ಲಿ ಪ್ರಸಿದ್ಧರಾದ ಜಿ.ಕೆ.ಪಣಿಕ್ಕರ್ ನೇತೃತ್ವದಲ್ಲಿತ್ತು ಎಂಬುದನ್ನು ನೆನಪಿಸಿದರು.
ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಆಡಳಿತ ಸಮಿತಿ ಸದಸ್ಯರುಗಳಾದ ಪಿ.ಎನ್.ಆರ್.ಅಮ್ಮಣ್ಣಾಯ ಹಾಗೂ ಕಮಲ ಪಟ್ಟಾಜೆ ಅವರನ್ನು ಸಚಿವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು. ಬೇಬಿ ಶೆಟ್ಟಿ, ಎಂ.ಕೃಷ್ಣನ್, ನ್ಯಾಯವಾದಿ ವೆಂಕಟ್ರಮಣ ಭಟ್, ಮದನ, ಕಾತ್ಯಾಯಿನಿ, ಸುಕುಮಾರನ್, ವ್ಯಾಪಾರಿ ನೇತಾರ ಕುಂಜಾರು ಮುಹಮ್ಮದ್ ಕುಂಞÂ ಪಾಲ್ಗೊಂಡು ಶುಭಾಹಾರೈಸಿದರು. ಉತ್ಸವ ಸಮಿತಿ ಸಂಚಾಲಕ ಬಿ.ಕೃಷ್ಣ ಬದಿಯಡ್ಕ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಜಿ ವಂದಿಸಿದರು.


