ಬದಿಯಡ್ಕ: ಬದಿಯಡ್ಕದ ಕ್ರಿಯೆಟಿವ್ ಕಾಲೇಜಿನ ಆಶ್ರಯದಲ್ಲಿ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ಇತ್ತೀಚೆಗೆ ನಡೆಯಿತು.
ಕಾಲೇಜಿನ ಆಡಳಿತ ಟ್ರಸ್ಟಿ ರಂಗ ಶರ್ಮ ಉಪ್ಪಂಗಳ ಅವರು ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆ-ಪಂದ್ಯಾಟಗಳು ಒಗ್ಗಟ್ಟಿನ ಮಹತ್ವವನ್ನು ಕಲಿಸಿಕೊಡುತ್ತದೆ. ಸಾಮೂಹಿಕವಾಗಿ ಒಗ್ಗಟ್ಟು ಎನ್ನುವುದು ಯಶಸ್ಸಿನ ಮೆಟ್ಟಲುಗಳು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಶಿವದಾಸ್ ಸಿ.ಎಚ್., ಪ್ರಾಧ್ಯಾಪಿಕೆ ಶ್ರೀಜ, ವಿದ್ಯಾರ್ಥಿ ನಾಯಕರು, ಅಧ್ಯಾಪಕರು, ವಿವಿಧ ಕಾಲೇಜುಗಳ ಕ್ರೀಡಾಳುಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕ ಸತೀಶ್ ಸ್ವಾಗತಿಸಿ, ಉಪನಾಯಕ ಶಿಜೇಶ್ ವಂದಿಸಿದರು. ವಾಲಿಬಾಲ್ ಪಂದ್ಯಾಟದಲ್ಲಿ ಸರ್ಕಾರಿ ಕಾಲೇಜು ಕಾಸರಗೋಡು ಹಾಗೂ ಹಗ್ಗಜಗ್ಗಾಟದಲ್ಲಿ ಕ್ರಿಯೆಟಿವ್ ಕಾಲೇಜು ಬದಿಯಡ್ಕ ತಂಡಗಳು ಬಹುಮಾನಗಳನ್ನು ಗಳಿಸಿಕೊಂಡವು.


