ಬದಿಯಡ್ಕ: ದೇವರಿಗೆ ಅಲಂಕಾರವು ಹೇಗೆ ಭೂಷಣವೋ ಹಾಗೆಯೇ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಉತ್ಸವಾಂಗಣದ ಅಲಂಕಾರಕ್ಕೂ ಪ್ರಾಧಾನ್ಯತೆಯಿದೆ. ಊರಿನ ಪ್ರತೀಮನೆ ಹಾಗೂ ಉತ್ಸವಾಂಗಣವು ಅಲಂಕೃತಗೊಂಡು ಕಂಗೊಳಿಸುವುದರಿಂದ ದೇವಚೈತನ್ಯ ವೃದ್ಧಿಯಾಗುತ್ತದೆ ಎಂದು ಗೋಸಾಡ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದ್ಕಾಡಿ ನಾರಾಯಣ ರೈ ಅಭಿಪ್ರಾಯಪಟ್ಟರು.
ಫೆ.6ರಿಂದ 12ರ ತನಕ ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಜರಗಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಮ್ಮಿಕೊಂಡ ಉತ್ಸವಾಂಗಣ ಅಲಂಕಾರ ಮುಹೂರ್ತಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. ನಿರ್ಮಲಚಿತ್ತದಿಂದ ಉತ್ಸವದಲ್ಲಿ ಪ್ರತಿಯೊಬ್ಬರೂ ತಮ್ಮ ಸೇವೆಯನ್ನು ದೇವರಿಗೆ ಸಮರ್ಪಿಸಬೇಕು ಎಂದರು.
ನಾರಾಯಣ ಗೋಸಾಡ ಮಾತನಾಡಿ ತಳಿರು ತೋರಣಗಳಿಂದ ಅಲಂಕೃತಗೊಂಡ ಸ್ಥಳದಲ್ಲಿ ದುಷ್ಟ ಶಕ್ತಿಗಳು ನಿವಾರಣೆಯಾಗುವುದಲ್ಲದೆ ಸಾತ್ವಿಕ ಚೈತನ್ಯ ಸೃಷ್ಟಿಯಾಗುತ್ತದೆ. ಹಿಂದಿನ ಕಾಲದಿಂದಲೇ ನಡೆದುಕೊಂಡು ಬಂದಂತಹ ಪ್ರತಿಯೊಂದು ಕಾರ್ಯಗಳಿಗೂ ಅದರದ್ದೇ ಆದ ಪ್ರಾಧಾನ್ಯತೆಯಿದೆ. ಈ ನಿಟ್ಟಿನಲ್ಲಿ ಉತ್ಸವಾಂಗಣದ ಅಲಂಕಾರವು ಆಗಮಿಸುವ ಭಕ್ತಾದಿಗಳಿಗೆ ನೆಮ್ಮದಿಯನ್ನು ನೀಡಲು ಕಾರಣವಾಗುತ್ತದೆ. ಜೀರ್ಣೋದ್ಧಾರದ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕಾಗಿ ಅವರು ಕರೆನೀಡಿದರು. ಪ್ರಚಾರ ಸಮಿತಿಯ ಸಂಚಾಲಕ ಸುನಿಲ್ ಪಿ.ಆರ್. ಮಾತನಾಡಿ ನಮ್ಮ ಈ ತಲೆಮಾರಿಗೆ ಬ್ರಹ್ಮಕಲಶೋತ್ಸವವನ್ನು ಕಾಣುವ ಹಾಗೂ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಿಕ್ಕಿರುವುದು ನಮ್ಮ ಪಾಲಿಗೆ ಒದಗಿ ಬಂದ ಪುಣ್ಯಕಾರ್ಯವಾಗಿದೆ ಎಂದರು. ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಪರಮೇಶ್ವರ ಭಟ್ ಗೋಸಾಡ, ಪ್ರಭಾಕರ ರೈ ಮಠದಮೂಲೆ, ಎಂ.ಸುಧಾಮ ಗೋಸಾಡ, ಅಲಂಕಾರ ಸಮಿತಿಯ ಸಂಚಾಲಕ ಶಿವರಾಮ (ದಾಮು), ಪ್ರ.ಅರ್ಚಕ ರಾಘವೇಂದ್ರ ಚಡಗ ಶುಭಕೋರಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ನಿರೂಪಿಸಿದರು. ಅಲಂಕಾರ ಸಮಿತಿಯ ಕಾರ್ಯದರ್ಶಿ ಸತೀಶ್ ರೈ ಗೋಸಾಡ ಸ್ವಾಗತಿಸಿ, ಸುಧಾಕರ ರೈ ತೋಟದಮೂಲೆ ವಂದಿಸಿದರು. ಸಭಾಕಾರ್ಯಕ್ರಮದ ನಂತರ ಅಲಂಕಾರ ಕಂಬವನ್ನು ಏರಿಸಲಾಯಿತು.
ಬ್ರಹ್ಮಕಲಶೋತ್ಸವದ ಅಲಂಕಾರ ಸಮಿತಿಯ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತೀ ಮನೆಯಲ್ಲಿ ಮಾತೆಯರು, ಮಕ್ಕಳು ಸೇರಿ ಪೋಣಿಸಿದ ಕಾಗದದ ಅಲಂಕೃತ ಮಾಲೆಗಳನ್ನು ಸಮಿತಿಗೆ ಹಸ್ತಾಂತರಿಸಲಾಯಿತು.

