ಕಾಸರಗೋಡು: ಮನೆಯಿಲ್ಲದ ಮಂದಿಗೆ ಸುರಕ್ಷಿತ, ಸುದೃಡ, ಸ್ವಂತ ಮನೆ ಒದಗಿಸುವ ರಾಜ್ಯ ಸರಕಾರದ ಜನಪರ ಯೋಜನೆಗಳಿಲ್ಲಿ ಒಂದಾಗಿರುವ ಲೈಫ್ ಮಿಷನ್ ನಸೌಲಭ್ಯ ರಾಜ್ಯದ ಮೂಲ ನಿವಾಸಿಗಳಿಗೆ ಮಾತ್ರವಲ್ಲ ಎಂಬುದು ಗಮನಾರ್ಹ ವಿಚಾರ. ಇಂದು ರಾಜ್ಯ ವ್ಯಾಪ್ತಿಯಲ್ಲಿ ಬದುಕುತ್ತಿರುವ ಯಾವ ರಾಜ್ಯದ ಮೂಲನಿವಾಸಿಗಳಿಗೂ ಈ ಸೌಲಭ್ಯ ದೊರೆಯುತ್ತಿದೆ ಎಂಬುದು ಈ ಯೋಜನೆಯ ವಿಶೇಷತೆಯಾಗಿದೆ. ಮೂಲತಃ ಆಂದ್ರಪ್ರದೇಶದ ಸುನಿತಾ ಉಮೇಶ್ ಅವರು ಕಾಸರಗೋಡು ಬ್ಲೊಕ್ ಪಂಚಾಯತ್ ನೇತೃತ್ವದ ಲೈಫ್ ಮಿಷನ್ ಯೋಜನೆಯ ಫಲಾನುಭವಿಯಾಗಿ ಸ್ವಂತ ಮನೆ ಪಡೆದಿರುವುದು ಇದಕ್ಕೊಂದು ಉತ್ತಮ ನಿರ್ದಶನ.
ಕುಂಬಳೆ ಕುಂಟಂಗೇರಡ್ಕದಲ್ಲಿ ವಾಸವಾಗಿರುವ ಸುನಿತಾ ಅವರು ಆಂಧ್ರಪ್ರದೇಶದಿಂದ ಕೆಲವು ವರ್ಷಗಳ ಹಿಂದೆ ಕುಂಬಳೆ ನಿವಾಸಿ ಎಸ್. ಉಮೇಶ್ ಎಂಬವರನ್ನು ವಿವಾಹವಾಗಿ ಇಲ್ಲಿಗೆ ಆಗಮಿಸಿದವರು. 2018ರಲ್ಲಿ ಅಸೌಖ್ಯಕ್ಕೀಡಾಗಿ ಉಮೇಶ್ ಅವರು ನಿಧನಹೊಂದಿದ್ದರು. ಇಬ್ಬರು ಪುಟ್ಟ ಮಕ್ಕಳೊಂದಿಗೆ ಮುರುಕಲು, ಹೆಂಚಿನ ಮನೆಯೊಂದರಲ್ಲಿ ಬಹಳ ತ್ರಾಸದಾಯಕ ಬದುಕು ಸವೆಸುತ್ತಿದ್ದರು. ಸರಕಾರಿ ಶಾಲೆಯಲ್ಲಿ ಇವರ ಮಕ್ಕಳಾದ 12 ವರ್ಷ ಪ್ರಾಯದ ಮನೀಷ್ 8ನೇ ತರಗತಿಯಲ್ಲಿ, 9 ವರ್ಷದ ಅನೀಷ್ 4ನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಸರಕಾರ 4 ಸೆಂಟ್ಸ್ ಜಾಗದಲ್ಲಿ 2 ಮಲಗುವ ಕೋಣೆ, ಒಂದು ಹಾಲ್, ಅಡುಗೆ ಮನೆಯನ್ನು ಹೊಂದಿರುವ ಮನೆಯನ್ನು ಈ ಯೋಜನೆ ಮೂಲಕ ನಿರ್ಮಿಸಿ ನೀಡಿದೆ. ಈಗ ಅವರು ಸುರಕ್ಷಿತವಾಗಿ ಬದುಕುವ ಭರವಸೆಯಲ್ಲಿದ್ದಾರೆ. ಕಾಸರಗೋಡು ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಮನೆಯ ಕೀಲಿಕೈಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಸುನಿತಾ ಅವರಿಗೆ ಹಸ್ತಾಂತರಿಸಿದರು.


