ಮಂಜೇಶ್ವರ: ಸಾರ್ವಜನಿಕರಿಗೆ ಸೇವೆಯೊದಗಿಸುವಲ್ಲಿ ಗಮನಾರ್ಹ ಸಾಧನೆಯಿಂದ ದಾಖಲೆ ನಿರ್ಮಿಸಿರುವ ಮಂಜೇಶ್ವರ ಬ್ಲಾಕ್ ಪಂಚಾಯತಿಗೆ ಐ.ಎಸ್.ಒ. ಅಂಗೀಕಾರಕ್ಕೆ ಅರ್ಹವಾಗಿದೆ.
ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ ನಡೆಸಲಾಗುವ ಜನಪರ ಚಟುವಟಿಕೆಗಳ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳ ಹಿನ್ನೆಲೆಯಲ್ಲಿ ಈ ಐ.ಎಸ್.ಒ. ಅರ್ಹತಾಪತ್ರ ಲಭಿಸಿದೆ. ಸೇವೆಗಳ ಗುಣಮಟ್ಟ ಮತ್ತು ಎಷ್ಟು ವರ್ಷಗಳ ಹಿಂದಿನವೇ ಆಗಿದ್ದರೂ, ನಿಮಿಷಾರ್ಧದಲ್ಲಿ ಕಡತಗಳನ್ನು ಲಭಿಸುವಂತೆ ಮಾಡಿ ಅಗತ್ಯದ ಸೇವೆ ಒದಗಿಸಿದ ಹೆಗ್ಗಳಿಕೆ ಈ ಅರ್ಹತೆಯನ್ನು ತಂದಿತ್ತಿದೆ. ಕೇಂದ್ರ-ರಾಜ್ಯ ಸರಕಾರಗಳ ವಿವಿಧ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿ ಜನತೆಗೆ ಅಗತ್ಯ ಸಮಯದಲ್ಲಿ ಮಾಹಿತಿ ನೀಡುವ ಸೌಲಭ್ಯ ಬ್ಲಾಕ್ ಪಂಚಾಯತಿ ಕಚೇರಿಯಲ್ಲಿದೆ. ಕಚೇರಿಗೆ ಯಾವ ಅಗತ್ಯಕ್ಕೆ ಬರುವ ಜನ ಸಂತೃಪ್ತಿಯೊಂದಿಗೆ ಮರಳುವ ಸ್ಥಿತಿ ಇಲ್ಲಿರುವುದು ಇದಕ್ಕೆ ಪ್ರಧಾನ ಕಾರಣವಾಗಿದೆ.
ಈ ಸಂಬಂಧ ನಡೆದ ಸಮಾರಂಭದಲ್ಲಿ ಶಾಸಕ ಎಂ.ಸಿ.ಕಮರುದ್ದೀನ್ ಐ.ಎಸ್.ಒ.ಅರ್ಹತಾ ಪತ್ರ ಲಭಿಸಿರುವ ಘೋಷಣೆ ನಡೆಸಿ, ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಮತ್ತು ಕಾರ್ಯದರ್ಶಿ ಎನ್.ಸುರೇಂದ್ರನ್ ಅವರಿಗೆ ಹಸ್ತಾಂತರಿಸಿದರು. ಬ್ಲಾಕ್ ಪಂಚಾಯತಿ ಘಟಕ ಸಂಸ್ಥೆಗಳಿಗೂ ಈ ಸರ್ಟಿಫಿಕೇಟ್ ಒದಗಿಸುವಂತೆ ಮಾಡುವುದು ಮುಂದಿನ ಗುರಿ ಎಂದು ಸಂಬಂಧಪಟ್ಟವರು ತಿಳಿಸಿದರು.

