ಪೆರ್ಲ: ಪ್ರಥಮ ಚಿಕಿತ್ಸೆಗಳನ್ನು ಅರಿತಿರುವುದು, ತಿಳಿದ ವಿಚಾರಗಳನ್ನು ಹಂಚಿಕೊಳ್ಳುವುದು ಇಂದಿನ ದಿನಗಳಲ್ಲಿ ಅತೀ ಅಗತ್ಯ. ಆಧುನಿಕ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಹಲವು ಅಪಾಯಗಳನ್ನು ಇದರಿಂದಾಗಿ ನಿವಾರಿಸಬಹುದು ಎಂದು ಶಂಕರ ಸೇವಾ ಸಮಿತಿಯ ಪದಾಧಿಕಾರಿ ವೆಂಕಟ್ರಮಣ ಭಟ್ ಎಡಮಲೆ ಹೇಳಿದರು.
ಅವರು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ವತಿಯಿಂದ ಪೆರ್ಲ ಶಂಕರ ಸದನದಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಇದೊಂದು ಉತ್ತಮ ಸಾಮಾಜಿಕ ಕಾರ್ಯವಾಗಿದ್ದು, ಈ ಮಾದರಿ ಕಾರ್ಯಕ್ರಮ ಆಯೋಜಿಸಿದ ಸಂಘಟನೆ ಅಭಿನಂದನೀಯ ಎಂದರು.
ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರದೀಪ ಕುಮಾರ ಶೆಟ್ಟಿ ಶುಭ ಹಾರೈಸಿದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಅವರು ಸಭಾಧ್ಯಕ್ಷತೆ ವಹಿಸಿದ್ದರು. ಬಿಎಯುಪಿ ಶಾಲೆಯ ವಿದ್ಯಾರ್ಥಿನಿ ಅನ್ವಿತಾ ಪ್ರಾರ್ಥಿಸಿದಳು. ಕುಂಬಳೆ ಉಪಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ಮಾಸ್ತರ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸುರೇಖ ಟೀಚರ್ ವಂದಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಮಾಸ್ತರ್ ನಿರೂಪಿಸಿದರು.
ಇತ್ತೀಚೆಗೆ ಕುಂಬಳೆ ಉಪಜಿಲ್ಲಾ ಘಟಕ ನಡೆಸಿದ ಎಲ್ ಎಸ್ ಎಸ್, ಯು ಎಸ್ ಎಸ್ ತರಬೇತಿಯ ಮಾದರಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು. ಪ್ರಥಮ ಚಿಕಿತ್ಸಾ ತರಬೇತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಖ್ಯಾತ ವೈದ್ಯರಲ್ಲೊಬ್ಬರಾದ ಡಾ.ರಾಮಚಂದ್ರ ಭಟ್ ಅವರು ಆಗಮಿಸಿದ್ದರು. ಅಪಾಯಗಳು, ರೋಗಲಕ್ಷಣಗಳು, ನಿರ್ಣಯಗಳು, ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿಯನ್ನು ಸವಿವರವಾಗಿ ಪ್ರಾತ್ಯಕ್ಷಿಕೆಯೊಂದಿಗೆ ಮಂಡಿಸಿದರು. ತರಗತಿಯು ಶಿಕ್ಷಕರಿಗೂ ಸಾರ್ವಜನಿಕರಿಗೂ ಉಪಯುಕ್ತವೆನಿಸಿ ಮೆಚ್ಚುಗೆಗಳಿಸಿತು.




