ಉಪ್ಪಳ: ಇಂದು ನಾವೇ ಉತ್ತು ಬಿತ್ತಿ ಬೆಳೆದ ಆಹಾರ ಸೇವಿಸದೆ ಕಾಸು ತೆತ್ತು ಅಂಗಡಿ ಅಕ್ಕಿ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ, ದೇವಸೃಷ್ಟಿಯ ಭೂಮಿಯಲ್ಲಿ ಅವನದೇ ಸೃಷ್ಟಿಯಾದ ನಮ್ಮ ಶರೀರ ಬಳಸಿ ಕೃಷಿಯಲ್ಲಿ ತೊಡಗಿಸಿದಾಗ ಭೂಮಿ ಸಸ್ಯ ಶ್ಯಾಮಲೆಯಾಗಿ ಉತ್ಪತ್ತಿ ಹೆಚ್ಚಾಗುತ್ತದೆ ಎನ್ನುವ ನಮ್ಮ ಹಿರಿಯರ ಕೃಷಿ ಪರ ಕಳಕಳಿಯನ್ನು ನಾವು ಅರಿತು, ಆರೋಗ್ಯದಾಯಕ ಸಾವಯವ ಕೃಷಿ ಸಂಸ್ಕøತಿ ಉಳಿಸಿ ಉತ್ತಮ ಕೃಷಿಕನಾಗಿ ಬೆಳೆಯುವ ಅಗತ್ಯ ಇದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ತಿಳಿಸಿದರು.
ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಭಾನುವಾರ ನಡೆದ "ಕೊಯ್ಲು ಉತ್ಸವ ಸಂಭ್ರಮ"ದಲ್ಲಿ ಶ್ರೀಗಳು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಆಶ್ರಮದ ವಿಶ್ವಸ್ಥ ಮೋನಪ್ಪ ಭಂಡಾರಿಯವರು ನಾವು ರಾಸಾಯನಿಕ ರಹಿತ ಸಾವಯವ ಕೃಷಿಯಿಂದ ಶುದ್ಧ ಪರಿಸರದಲ್ಲಿ ಬಾಳೋಣ ಎಂದು ಅಭಿಪ್ರಾಯಪಟ್ಟರು. ಅತಿಥಿಗಳಾಗಿ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಪದ್ಮನಾಭ ನರಿಂಗಾನ ಮತ್ತು ಬಾಬು ಪಚ್ಲಂಪಾರೆ ಉಪಸ್ಥಿತರಿದ್ದರು. ಕು.ಸ್ಮಿತಾ ಮತ್ತು ಕು.ಪ್ರಜ್ಞಾ ಕೊಂಡೆವೂರು ಇವರ ಪ್ರಾರ್ಥನೆಯೊಂದಿಗೆ ನಡೆದ ಕಾರ್ಯಕ್ರಮವನ್ನು ಹರೀಶ್ ಮಾಡ ನಿರ್ವಹಿಸಿದರು. ಬಳಿಕ ಶ್ರೀ ದೇವರ ಮುಂದೆ ಪ್ರಾರ್ಥಿಸಿ ,ಮುಟ್ಟಾಳೆ ಧರಿಸಿ ಪೂಜ್ಯ ಶ್ರೀಗಳ ನೇತೃತ್ವದಲ್ಲಿ , ಚೆಂಡೆ ಜಾಗಟೆ,ಮುತ್ತು ಕೊಡೆಗಳೊಂದಿಗೆ ಸೇರಿದ ಕೃಷಿ ಆಸಕ್ತರ ಆಕರ್ಷಕ ಮೆರವಣಿಗೆ ಗದ್ದೆಯೆಡೆಗೆ ಸಾಗಿತು. ಗದ್ದೆಯಲ್ಲಿ ಶ್ರೀಗಳೊಂದಿಗೆ ಅತಿಥಿಗಳೂ ಸೇರಿ ಭತ್ತ ಕಟಾವಿಗೆ ಚಾಲನೆ ನೀಡಿದರು. 93 ರ ಹಿರಿಯಜ್ಜಿ ಕಮಲಮ್ಮ ಮತ್ತು 4-5 ವರ್ಷದ ಚಿಣ್ಣರೂ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದುದು ಗಮನ ಸೆಳೆಯಿತು. ಭತ್ತ ಕಟಾವು ಮಾಡಿ ಅಲ್ಲಿಯೇ ಭತ್ತ ಹೊಡೆಯುವುದರಲ್ಲೂ ಆಸಕ್ತರು ಪಾಲ್ಗೊಂಡರು.



