ಮುಳ್ಳೇರಿಯ: ದೇಲಂಪಾಡಿ ಸಮೀಪದ ಉಜಂಪಾಡಿ ಮಣಿಯೂರು ಶ್ರೀ ಶಾಸ್ತಾರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಸಭೆಯು ಕ್ಷೇತ್ರದ ಸಭಾಂಗಣದಲ್ಲಿ ಸಮಿತಿಯ ಉಪಾಧ್ಯಕ್ಷ ವಿಶ್ವವಿನೋದ ಬನಾರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಮಿತಿಯ ಕೋಶಾಧಿಕಾರಿ ಮೆಣಸಿನಕಾನ ಗೋಪಾಲಕೃಷ್ಣ ಕುಂಜತ್ತಾಯ ಮಾತನಾಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು. ಹೆಚ್ಚು ಪ್ರಾದೇಶಿಕ ಸಮಿತಿಗಳನ್ನು ರಚಿಸಬೇಕು ಎಂದು ಸಲಹೆ ನೀಡಿದರು. ಶ್ರೀ ಶಾಸ್ತಾರ ಕ್ಷೇತ್ರದ ಆಡಳಿತ ಮೊಕ್ತೇಸರ ಅರಿಯಡ್ಕ ಚಿಕ್ಕಪ್ಪ ನಾೈಕ್ ಅವರು ಮಾತನಾಡಿ ಗರ್ಭಗುಡಿಯ ಕೆಲಸವನ್ನು ಹಂತ ಹಂತವಾಗಿ ಪೂರ್ಣಗೊಳಿಸಬೇಕಿದೆ ಅಲ್ಲದೆ ಹೆಚ್ಚಿನ ಭಕ್ತರ ಸಹಾಯಧನ ಅಗತ್ಯವಿದೆ. ಸರ್ಕಾರದಿಂದ ಸಿಗಲಿರುವ ದತ್ತಿ ನಿಧಿಯ ಬಗ್ಗೆ ಪ್ರಯತ್ನಿಸಲಾಗುವುದು ಎಂದರು. ಸಮಿತಿಯ ಗೌರವ ಸಲಹೆಗಾರ ಕಲ್ಲಡ್ಕ ಶಿವರಾಮ ಕಲ್ಲೂರಾಯ ಹಾಗು ಕ್ಷೇತ್ರದ ಮೊಕ್ತೇಸರ ಊಜಂಪಾಡಿ ನಾರಾಯಣ ನಾೈಕ್ ತಾಂತ್ರಿಕ ವಿಧಿ ವಿಧಾನ ಅಲ್ಲದೆ ಕ್ಷೇತ್ರದ ನವೀಕರಣಕ್ಕೆ ಅಗತ್ಯವುಳ್ಳ ಸಲಕರಣೆಗಳ ಬಗ್ಗೆ ಮಾತನಾಡಿದರು.
ಕ್ಷೇತ್ರದ ಹೊರಾಂಗಣದ ಚಪ್ಪರಗಳನ್ನು ವಾಲ್ತಾಜೆ ಮಣಿಯೂರು, ಮುದಿಯಾರು, ದೇಲಂಪಾಡಿ ಪ್ರಾದೇಶಿಕ ಸಮಿತಿಗಳ ಸಹಕಾರದೊಂದಿಗೆ ನಿರ್ಮಿಸಲು ತೀರ್ಮಾನಿಸಲಾಯಿತು.
ವಿವಿಧ ಪ್ರಾದೇಶಿಕ ಸಮಿತಿಗಳ ಪ್ರತಿನಿಧಿಗಳಾದ ಕಲ್ಲಡ್ಕ ರಾಮಯ್ಯ ರೈ, ದೇಲಂಪಾಡಿ ಶ್ರೀಧರ ಗೌಡ, ರಾಜೇಶ್ ರೈ ಮಣಿಯೂರು, ಮಣಿಯೂರು ವಿಶ್ವನಾಥ ರೈ, ಸಂಜೀವ ರೈ ಮುದಿಯಾರು, ಚಿಕ್ಕಪ್ಪ ರೈ ಮಣಿಯೂರು, ಲಂಬೋಧರ ಶೆಟ್ಟಿ ಮಣಿಯೂರು, ವಿನಯ ಪ್ರಸಾದ್ ಮಿತ್ತಂತರ, ಹರೀಶ ಗೌಡ ಕುತ್ತಿಮುಂಡ, ರಾಜೇಶ್ ರೈ ಮಣಿಯೂರು, ಸಂತೋಷ್ ರೈ ಮೆಣಸಿನಕಾನ, ಮುದಿಯಾರು ರಮಾನಂದ ರೈ ಮೊದಲಾದವರು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೋಟಿಗದ್ದೆ ಗೋಪಾಲಯ್ಯ ಹಾಗು ಜತೆ ಕಾರ್ಯದರ್ಶಿ ಊಜಂಪಾಡಿ ವಿಶ್ವನಾಥ ರೈ ಕಾರ್ಯಕ್ರಮ ನಿರೂಪಿಸಿದರು.
ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಅವರು ಸ್ವಾಗತಿಸಿ, ಸಮಿತಿಯ ಕಾರ್ಯಚಟುವಟಿಕೆ ಹಾಗು ತಾಂತ್ರಿಕ ಸದನದಿಂದ ಅಲ್ಲದೆ ಕ್ಷೇತ್ರ ಶಿಲ್ಪಿಯವರ ಭಾಗದಿಂದ ದೊರಕುತ್ತಿರುವ ಸಹಕಾರದ ಬಗ್ಗೆ ವಿವರಿಸಿದರು. ಕಾರ್ಯದರ್ಶಿ ಮಾಸ್ತರ್ ವೆಂಕಟ್ರಮಣ ಭಟ್ ವಂದಿಸಿದರು.

