ಕಾಸರಗೋಡು: ವಿಶ್ವವ್ಯಾಪಿಯಾಗುತ್ತಿರುವ ಕೋವಿಡ್-19ವೈರಸ್ ಬಗ್ಗೆ ಮುಂಜಾಗ್ರತೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದರೆ, ಕೇರಳದ ಮದ್ಯಪ್ರಿಯರು ಮದ್ಯಮಾರಾಟ ಕೇಂದ್ರದ ತೆರೆಯುವ ಹಾಗೂ ಮುಚ್ಚುವ ಕಾಲಾವಧಿಯ ಬಗ್ಗೆಯೇ ಹೆಚ್ಚು ಚಿಂತಿತರಾಗಿರುವುದು ಕಂಡುಬರುತ್ತಿದೆ.
ರಾಜ್ಯದಲ್ಲಿ ಬಾರ್‍ಗಳನ್ನು ಮುಚ್ಚಗಡೆಗೊಳಿಸಿರುವುದರಿಂದ ಬೀವರೇಜಸ್ ಔಟ್‍ಲೆಟ್‍ಗಳಲ್ಲಿ ಜನದಟ್ಟಣೆ ಸಹಜವಾಗಿ ಹೆಚ್ಚಾಗಿದೆ. ಕರೊನಾ ವೈರಸ್ ಭೀತಿಯ ನಡುವೆಯೂ ಮದ್ಯಕ್ಕಾಗಿ ಸರತಿಸಾಲಲ್ಲಿ ನಿಲ್ಲುವವರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಬೀವರೇಜಸ್ ಮದ್ಯಮಾರಾಟಕೇಂದ್ರಗಳು ತೆರೆದು ಕಾರ್ಯಾಚರಿಸುತ್ತಿದ್ದು, ಮದ್ಯಕ್ಕಾಗಿ ಸರತಿಸಾಲಲ್ಲಿ ನಿಲ್ಲುವವರಿಗೆ ಸರ್ಕಾರ ಮಾನದಂಡ ರೂಪಿಸಿದೆ. ಕಟ್ಟಾಯವಾಗಿ ಮಾಸ್ಕ್ ಧರಿಸಿರಬೇಕು, ಒಂದು ಮೀ. ಅಂತರ ಪಾಲಿಸುವುದರ ಜತೆಗೆ ಔಟ್‍ಲೆಟ್ ಎದುರು ಗುಂಪುಗೂಡದಂತೆ ನಿರ್ದೇಶಿಸಲಾಗಿದೆ. ಈ ಹಿಂದೆ ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ತೆರೆದುಕಾರ್ಯಾಚರಿಸುತ್ತಿದ್ದ ಬೀವರೇಜಸ್ ಔಟ್‍ಲೆಟ್‍ಗಳು, ಇನ್ನುಮುಂದೆ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಮಾತ್ರ ಕಾರ್ಯಾಚರಿಸಲಿದೆ.
ಬೀವರೇಜಸ್ ಕಾರ್ಪೋರೇಶನ್‍ನ 265 ಹಾಗೂ ಕನ್ಸ್ಯೂಮರ್ ಫೆಡ್‍ನ 36 ಒಳಗೊಂಡಂತೆ 301 ಔಟ್‍ಲೆಟ್‍ಗಳು ಕೇರಳ ರಾಜ್ಯದಲ್ಲಿ ಕಾರ್ಯಾಚರಿಸುತ್ತಿದೆ. ಕೆಲವೆಡೆ ಜನರ ದಟ್ಟಣೆ ನಿಯಂತ್ರಿಸಲು ಪೊಲೀಸರು ಲಾಟಿಪ್ರಹಾರವನ್ನೂ ನಡೆಸಿದ್ದಾರೆ.


