ಕಾಸರಗೋಡು : ಜಿಲ್ಲೆಯ ಬಹು ನಿರೀಕ್ಷಿತ ಕೇಂದ್ರ ಸರ್ಕಾರ ಅನುಮೋದಿಸಿರುವ ರಾಜ್ಯದ ಮೊದಲ ಯೋಗ ಮತ್ತು ನ್ಯಾಚುರೋಪತಿ ಸಂಶೋಧನಾ ಕೇಂದ್ರದ ಕಾಮಗಾರಿಗಳು ಮುಂದಿನ ಆರು ತಿಂಗಳುಗಳೊಳಗೆ ಆರಂಭಗೊಳ್ಳಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ನೀಲೇಶ್ವರ ಸಮೀಪದ ಕರಿಂದಳ ಗ್ರಾಮದಲ್ಲಿ ಗುರುತಿಸಲಾದ ನಿವೇಶನದಲ್ಲಿ ಸಂಶೋಧನಾ ಕೇಂದ್ರದ ಕಾಮಗಾರಿಗಳು ಆರು ತಿಂಗಳೊಳಗೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ ಎಸ್ಸೋ ನಾಯಕ್ ಅವರು ಇತ್ತೀಚೆಗೆ ದೆಹಲಿಯಲ್ಲಿ ತಮ್ಮನ್ನು ಭೇಟಿಯಾದ ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಅವರಿಗೆ ಈ ಭರವಸೆಯ ಮಾತುಗಳನ್ನಾಡಿದರು ಎಂದು ತಿಳಿದುಬಂದಿದೆ.
ಪ್ರಸ್ತುತ ಸಾಲಿನ ಮುಂಗಡ ಪತ್ರ(ಬಜೆಟ್)ದ ನಿಗದಿತ ನಿಧಿ ಲಭ್ಯವಾದೊಡನೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಎರಡು ವರ್ಷಗಳಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಸಂಶೋಧನಾ ಕೇಂದ್ರ ಕಾರ್ಯಾರಂಭಗೊಳ್ಳಲಿದೆ ಎಂದು ಸಚಿವರು ಸಂಸದರಿಗೆ ತಿಳಿಸಿದರು. ಕರಿಂದಳ ಗ್ರಾಮದಲ್ಲಿ ಇದಕ್ಕಾಗಿ 15 ಎಕ್ರೆ ನಿವೇಶನ ಗುರುತಿಸಲಾಗಿದೆ. 2019ರ ಫೆ. 3 ರಂದು ಸ್ವತಃ ಕೇಂದ್ರ ಸಚಿವರು ಶಂಕುಸ್ಥಾಪನೆ ನೆರವೇರಿಸಿ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಮೊದಲ ಹಂತದ 90 ಕೋಟಿ ರೂ.ಗಳ ಅನುದಾನ ಮೀಸಲಿರಿಸುವ ಬಗ್ಗೆ ತಿಳಿಸಿದ್ದರು. ಪ್ರಸ್ತುತ ಗುರುತಿಸಲಾದ ನಿವೇಶನಕ್ಕೆ ಹೆಚ್ಚುವರಿಯಾಗಿ ಇನ್ನೂ ಐದು ಎಕ್ರೆ ನಿವೇಶನ ಲಭ್ಯವಾದಲ್ಲಿ 200 ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ಆಸ್ಪತ್ರೆ ಹಾಗೂ ಎಂ.ಎಸ್ಸಿ ತರಗತಿಗಳನ್ನು ಆರಂಭಿಸಲು ಸಾಧ್ಯವಾಗುವುದು. ಈ ಹಿನ್ನೆಲೆಯಲ್ಲಿ ಅಗತ್ಯದ 5 ಎಕ್ರೆ ನಿವೇಶನವನ್ನು ಖರೀದಿಸಲು ಚಟುವಟಿಕೆಗಳು ಆರಂಭಗೊಂಡಿದೆ. ಇಂತಹ ಯತ್ನ ಸಾಫಲ್ಯಗೊಂಡರೆ ಸೆಂಟರ್ ರಿಸರ್ಚ್ ಇಸ್ಟಿಟ್ಯೂಟ್ ಯೋಗ ಆಂಡ್ ನ್ಯಾಚುರೋಪತಿಯ ಮೊದಲ ಕೇಂದ್ರವಾಗಿ ಕಾಸರಗೋಡು ರಾಜ್ಯದಲ್ಲೇ ಮಹತ್ತರದ ಸ್ಥಾನ ಪಡೆಯಲಿದೆ.
2019ರ ಫೆ.3 ರಂದು ಶಂಕುಸ್ಥಾಪನೆಗೊಂಡ ಬಳಿಕ ಸಂಶೋಧನಾ ಕೇಂದ್ರದ ಯಾವುದೇ ಚಟುವಟಿಕೆಗಳು ಈವರೆಗೆ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಸದರಾದ ರಾಜಮೋಹನ ಉಣ್ಣಿತ್ತಾನ್ ಅವರು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಅವರನ್ನು ಕಳೆದ ವಾರದ ಭೇಟಿ ಮಾಡಿದ್ದ ವೇಳೆ ಪ್ರಸ್ತಾಪಿಸಿದ ಸಂದರ್ಭ ಕೇಂದ್ರ ಸಚಿವರು ಯೋಜನೆಯ ಕಾರ್ಯಚಟುವಟಿಕೆಗಳ ಬಗ್ಗೆ ಈ ಭರವಸೆಯ ಮಾತುಗಳನ್ನು ತಿಳಿಸಿರುವುದು ಜಿಲ್ಲೆಯ ಅಭಿವೃದ್ದಿಯ ಶಖೆಯ ಹೊಸ ಭರವಸೆಗೆ ಕಾರಣವಾಗಿದೆ.
ಚಿತ್ರ ಮಾಹಿತಿ: (1)ಸಂಸದ ರಾಜಮೋಹನ ಉಣ್ಣಿತ್ತಾನ್ ಅವರು ಶ್ರೀಪಾದ ಎಸ್ಸೋ ನಾಯಕ್ ಅವರಲ್ಲಿ ಮನವಿ ನೀಡಿ ಚರ್ಚಿಸುತ್ತಿರುವುದು,2019ರಲ್ಲಿ ಶಂಕುಸ್ಥಾಪನೆ ನೆರವೇರಿದ್ದ ಸಂದರ್ಭದ ಸಂಗ್ರಹ ಚಿತ್ರ.)



