ಕುಂಬಳೆ: ಅನಂತಪುರ ಶ್ರೀಕ್ಷೇತ್ರ ಪರಿಸರದಲ್ಲಿ ಮೇ.1 ರಿಂದ 3ರ ವರೆಗೆ ಆಯೋಜಿಸಲಾಗುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದಲ್ಲಿ ವಿಶೇಷವಾಗಿ ಹಮ್ಮಿಕೊಳ್ಳಲಾಗುವ ಕವಿ ಮಂಟಪ ಕಾರ್ಯಕ್ರಮದ ನಿರ್ವಾಹಕ ಸಮಿತಿಯ ಸಭೆ ಶನಿವಾರ ಸಂಜೆ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ನಡೆಯಿತು.
ನಿರ್ವಾಹಕ ಸಮಿತಿ ಉಪಾಧ್ಯಕ್ಷ ವೆಂಕಟ್ ಭಟ್ ಎಡನೀರು ಅಧ್ಯಕ್ಷತೆ ವಹಿಸಿದ್ದರು. ಮೇ.2 ಹಾಗೂ 3 ರಂದು ಪ್ರತ್ಯೇಕ ವೇದಿಕೆಯಲ್ಲಿ ನಿರಂತರ ಕವಿಗೋಷ್ಠಿಯನ್ನು ನಡೆಸುವ ಬಗ್ಗೆ ಈ ಸಂದರ್ಭ ಚರ್ಚಿಸಲಾಯಿತು. ಕನಿಷ್ಠ ನೂರು ಮಂದಿ ಕವಿಗಳನ್ನು ಪಾಲ್ಗೊಳಿಸಿ ಕವಿ ಮಂಟಪವನ್ನು ಆಕರ್ಷಣೀಯಗೊಳಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಅಖಿಲ ಭಾರತ ಮಟ್ಟದ ಕನ್ನಡ ಕವಿ-ಕಾವ್ಯಾಸಕ್ತರನ್ನು ಜೊತೆ ಸೇರಿಸುವ ಬಗ್ಗೆ ರೂಪುರೇಖೆ ತಯಾರಿಸಲಾಯಿತು. ಇದರ ಪೂರ್ವಭಾವಿಯಾಗಿ ಮಾ.28 ರಂದು ಶನಿವಾರ ಅಪರಾಹ್ನ 2 ರಿಂದ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ವಿಶೇಷ ಕವಿಗೋಷ್ಠಿ ಮತ್ತು ಸಮಾಲೋಚನೆಗಳನ್ನು ಪೆರ್ಲದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕವಿ ಮಂಟಪ ನಿರ್ವಾಹಕ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪ್ರಧಾನ ಸಂಚಾಲಕ ಹರೀಶ್ ಸುಲಾಯ ಒಡ್ಡಂಬೆಟ್ಟು, ಸಂಚಾಲಕರಾದ ಸುಂದರ ಬಾರಡ್ಕ, ಚೇತನಾ ಕುಂಬಳೆ, ವನಜಾಕ್ಷಿ ಚೆಂಬ್ರಕಾನ, ಶಶಿಕಲಾ ಕುಂಬಳೆ, ಸುಬ್ರಹ್ಮಣ್ಯ ನಾಯಕ್ ಬಿ. ಮೊದಲಾದವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಪುರುಷೋತ್ತಮ ಭಟ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.


