ಕಾಸರಗೋಡು: ಕೊರೊನಾ ಕಾರಣ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಯ ವ್ಯರ್ಥವಾಗದೆ ಮನೆಯಲ್ಲೇ ಇದ್ದು ಅವರಿಗೆ ಆನ್‍ಲೈನ್ ಮೂಲಕ ತರಗತಿ ನಡೆಯುತ್ತಿದೆ.
ಕಣ್ಣೂರು ವಿಶ್ವ ವಿದ್ಯಾನಿಲಯದ ಕಾಸರಗೋಡು ಚಾಲದಲ್ಲಿರುವ ಕನ್ನಡ ಸಂಶೋಧನಾ ವಿಭಾಗದ ನೇತೃತ್ವದಲ್ಲಿರುವ ತುಳು ಡಿಪ್ಲೊಮಾ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ಆನ್ ಲೈನ್ ಮೂಲಕ ತರಗತಿ ನಡೆಸಿ ಆಧುನಿಕ ಸ್ಪರ್ಶ ನೀಡಿ ಗಮನ ಸೆಳೆದಿದ್ದಾರೆ.
ಚಾಲದಲ್ಲಿರುವ ಕಣ್ಣೂರು ವಿ.ವಿ. ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ಆಶ್ರಯದಲ್ಲಿ 2019ರ ಆಗಸ್ಟ್ ತಿಂಗಳಲ್ಲಿ ಒಂದು ವರ್ಷದ ತುಳು ಡಿಪ್ಲೊಮಾ ನೂತನ ತರಗತಿಗಳು ಆರಂಭಗೊಂಡಿತ್ತು. 19 ಮಂದಿ ವಿದ್ಯಾರ್ಥಿಗಳು ಡಿಪ್ಲೊಮಾ ಅಧ್ಯಯನ ನಡೆಸುತ್ತಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ತರಗತಿಗಳು ಮೊಟಕುಗೊಂಡಿದೆ. ಈ ಕಾರಣದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಮಯ ವ್ಯರ್ಥವಾಗಬಾರದು ಮತ್ತು ಮನೆಯಲ್ಲೇ ಇರುವ ವೇಳೆ ಸಮನಯ ವ್ಯರ್ಥಗೊಳ್ಳದೆ ಕಲಿಕೆಗೆ ಅವಕಾಶ ನೀಡುವ ಸದುದ್ದೇಶದಿಂದ ಆನ್‍ಲೈನ್ ತರಗತಿ ಆರಂಭಿಸಲಾಯಿತು.
ವಾಟ್ಸ್ ಆಫ್ ಬ್ಯುಸಿ:
ತರಗತಿಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿರುವ ವಾಟ್ಸ್‍ಆಫ್ ಗ್ರೂಪ್ ಕ್ರಿಯೆಟ್ ಮಾಡಲಾಗಿದ್ದು, ಗ್ರೂಪಿನ ಮೂಲಕ ದಿನನಿತ್ಯ ತರಗತಿಗಳು ನಡೆಯುತ್ತಿವೆ. ಬೆಳಿಗ್ಗೆ ನಿಗದಿಪಡಿಸಿದ ಸಮಯದಲ್ಲಿ ಎಲ್ಲರೂ ಜೊತೆಯಾಗಿ ಅಂದಿನ ತರಗತಿಗಳು ಆರಂಭಗೊಳ್ಳುತ್ತದೆ. ತಮ್ಮ ಅಧ್ಯಯನಕ್ಕೆ ಸಂಬಂಧಿಸಿದಂತೆ ಈ ಮೊದಲೇ ನೀಡಲಾದ ನಿಗದಿತ ವಿಷಯಕ್ಕೆ ಸಂಬಂಧಿಸಿ ತಯಾರಿಸಿದ ವಿಶೇಷ ಪ್ರಬಂಧಗಳ ಮಂಡನೆ ಪ್ರಸ್ತುತ ನಡೆಯುತ್ತಿದ್ದು, ಬರಹ ಮತ್ತು ವೀಡಿಯೊ-ಅಡಿಯೋ ಅವತರಣಿಕೆಗಳ ಮೂಲಕ ತರಗತಿಗಳ ಚಟುವಟಿಕೆಗಳು ನಡೆಯುತ್ತದೆ. ಜೊತೆಗೆ ಪ್ರಾಧ್ಯಾಪಕರು ಮಾಹಿತಿ-ನಿರ್ದೇಶನಗಳನ್ನೂ ನೀಡುತ್ತಾರೆ. ಕಣ್ಣೂರು ವಿವಿ ಚಾಲ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥ ಡಾ.ರಾಜೇಶ್ ಬೆಜ್ಜಂಗಳ, ಕಾಸರಗೋಡು ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ಆಶಾಲತಾ ಅವರು ಮಾಹಿತಿ, ನಿರ್ದೇಶನಗಳನ್ನು ನೀಡುತ್ತಿದ್ದಾರೆ.
ರಜೆಗಳಿಲ್ಲದ ತರಗತಿ!!
ತುಳು ಡಿಪ್ಲೊಮ ತರಗತಿಗಳು ಪ್ರತಿ ಶನಿವಾರ ಮತ್ತು ಭಾನುವಾರ ಮಾತ್ರ ವಿ.ವಿ. ಆವರಣದಲ್ಲಿ ನಡೆಯುತ್ತಿತ್ತು. ಆದರೆ ಇದೀಗ ಆರಂಭಿಸಿರುವ ಆನ್‍ಲೈನ್ ತರಗತಿ ವಾರದ ಎಲ್ಲಾ ದಿನಗಳೂ ನಡೆಯುತ್ತಿದ್ದು ಬೆಳಿಗ್ಗೆ 8 ರಿಂದ ರಾತ್ರಿ 9ರ ವರೆಗೂ ಕೆಲವು ದಿನ ಸಂವಾದ, ಚರ್ಚೆಗಳು ನಡೆಯುವ ಮೂಲಕ ಭರವಸೆ ಮೂಡಿಸಿದೆ.
ಅಭಿಮತ: 1) ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆಗಳಾಗಬಾರದೆಂಬ ಉದ್ದೇಶದಿಂದ ಆನ್‍ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಕಣ್ಣೂರು ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ನೇತೃತ್ವದಲ್ಲಿ ನಡೆಯುತ್ತಿರುವ ತುಳು, ಅರೆಬಿಕ್ ಡಿಪ್ಲೊಮ ಮತ್ತು ಸಂಶೋಧನಾ ತರಗತಿಗಳ ಆನ್‍ಲೈನ್ ತರಗತಿ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದಾರೆ. ಸಾಹಿತ್ಯದ ವಿವಿಧ ವಲಯಗಳಲ್ಲಿ ಸಂಶೋಧಕರಾಗಿ ಚಟುವಟಿಕೆಗಳಿಂದ ಇರುವ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ನೀಡುತ್ತಿದ್ದಾರೆ.
ಡಾ.ರಾಜೇಶ್ ಬೆಜ್ಜಂಗಳ
ಕಣ್ಣೂರು ವಿವಿ ಚಾಲ ಕೇಂದ್ರದ ಕನ್ನಡ ವಿಭಾಗ ಮುಖ್ಯಸ್ಥರು.
...........................................................................................................................................................................................
2) ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಮರಿದ ಎಲ್ಲಾ ವಿಭಾಗಗಳನ್ನೂ ಬಳಿಕ ಒಂದು ಹಂತದಲ್ಲಿ ಸರಿಪಡಿಸಬಹುದು. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಅದು ಸಾಧ್ಯವಾಗದು. ನಷ್ಟವಾದ ದಿನಗಳು ಭಾರೀ ಹಿನ್ನಡೆಯಾಗುವುದು. ಇದರಿಂದ ಆಧುನಿಕ ವ್ಯವಸ್ಥೆಗಳಾದ ವಾಟ್ಸ್‍ಆಪ್ ಅಥವಾ ಬೇರೆ ಯಾವುದಾದರೂ ತಂತ್ರಾಂಶ ಬಳಸಿ ತರಗತಿಗಳನ್ನು ನಡೆಸುವುದರಿಂದ ಲಾಕ್‍ಡೌನ್ ಗೆ ಬೆಂಬಲ ನೀಡಿದಂತಾಗುತ್ತದೆ, ತರಗತಿಗಳೂ ನಡೆದು ಶೈಕ್ಷಣಿಕ ನಷ್ಟಗಳಾಗದಂತೆ ಶೇ.50 ರಷ್ಟಾದರೂ ಕಲಿಕೆಗೆ ಸಾಧ್ಯವಾಗುತ್ತದೆ ಹಾಗೂ ಕಲಿಕಾ ಆಸಕ್ತಿಯ ಮೂಲಕ ಮಾನಸಿಕ ದೃಢತೆಯನ್ನೂ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಮನ್ಮಥ ಶೆಟ್ಟಿ ಪುತ್ತೂರು.
ತುಳು ಡಿಪ್ಲೊಮ ವಿದ್ಯಾರ್ಥಿ.
(ಪೋಟೋ ಬಿಡಿಕೆ_15 ಏಪ್ರಿಲ್_02(1)ವಿಭಾಗ ಮುಖ್ಯಸ್ಥ ಡಾ.ರಾಜೇಶ್ ಬೆಜ್ಜಂಗಳ,2)ತುಳು ಡಿಪ್ಲೊಮ ವಿದ್ಯಾರ್ಥಿ ಮನ್ಮಥ ಶೆಟ್ಟಿ ಪುತ್ತೂರು.)





