ಮಂಜೇಶ್ವರ: ಲಾಕ್ ಡೌನ್ ಕಾರಣದಿಂದ ಮಂಜೇಶ್ವರ ತಾಲೂಕು ವ್ಯಾಪ್ತಿಯ ಸಹಿತ ಕಾಸರಗೋಡಿನ ಜನಸಾಮಾನ್ಯರು ಮಂಗಳೂರಿನೊಂದಿಗೆ ಸಂಪರ್ಕ ಕಡಿತಗೊಂಡು ಪರಿತಪಿಸುತ್ತಿರುವ ಮಧ್ಯೆ ಮಂಗಳೂರಿನ ಖಾಸಗೀ ಆಸ್ಪತ್ರೆಯ ಆಂಬುಲೆನ್ಸ್ ವಾಹನವೊಂದು ಮಂಜೇಶ್ವರ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿರುವುದು ಸಾರ್ವಜನಿಕರ ಕಾರ್ಯಾಚರಣೆಯ ಮೂಲಕ ಸತ್ಯ ಹೊರಬಂದ ಘಟನೆ ನಡೆದಿದೆ.
ಲಾಕ್‍ಡೌನ್ ಕಾರಣ ಕರ್ನಾಟಕದ ಗಡಿ ಭಾಗಗಳೆಲ್ಲವೂ ಮುಚ್ಚಲ್ಪಟ್ಟಿದ್ದು, ತುರ್ತು ಚಿಕಿತ್ಸೆಗೂ ಮಂಗಳೂರಿಗೆ ತೆರಳಲಾಗದೆ ಈಗಾಗಲೇ 12 ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ ಲಾಕ್‍ಡೌನ್ ಆರಂಭಗೊಂಡ ದಿನದಿಂದಲೂ ಗಡಿ ಗ್ರಾಮ ವರ್ಕಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳೂರಿನ ಖಾಸಗೀ ಆಸ್ಪತ್ರೆಯೊಂದರ ಆಂಬುಲೆನ್ಸ್ ವಾಹನ ಶನಿವಾರ ವರೆಗೂ ಅಡ್ಡಾಡುತ್ತಿತ್ತು. ರೋಗಿಗಳಿಲ್ಲದಿದ್ದರೂ ಆಂಬುಲೆನ್ಸ್ ದಿನನಿತ್ಯ ಎರಡು ಮೂರು ಬಾರಿ ವರ್ಕಾಡಿಯ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದರ ಹಿಂದೆ ಬಿದ್ದ ಸಾರ್ವಜನಿಕರಿಗೆ ಕೊನೆಗೂ ನೈಜ ಶನಿವಾರ ಬಹಿರಂಗಗೊಂಡಿತು.
ಮಂಗಳೂರಿನ ಖಾಸಗೀ ಆಸ್ಪತ್ರೆಯ ನೌಕರರನ್ನು ಕರೆದೊಯ್ಯಲು ಮತ್ತು ಮರಳಿ ಊರಿಗೆ ಕರೆತರಲು ಈ ಆಂಬುಲೆನ್ಸ್ ಅಡ್ಡಾಡುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿತು. ಈ ಬಗ್ಗೆ ಮಂಜೇಶ್ವರ ಪೋಲೀಸರಿಗೆ ದೂರು ನಿಡಿದರೂ ಪೋಲೀಸರು ಮೌನ ವಹಿಸಿದರೆಂದು ಸಾರ್ವಜನಿಕರು ತಿಳಿಸಿದ್ದಾರೆ.
ತುರ್ತು ಚಿಕಿತ್ಸೆಗಳಿಗೂ ಕಾಸರಗೋಡಿಂದ ಮಂಗಳೂರಿಗೆ ತೆರಳಲು ಅನುವು ಮಾಡದೆ ಕರ್ನಾಟಕ ಗಡಿಯಲ್ಲಿ ಬೆದರಿಸಿ ಹಿಂದೆ ಕಳಿಸುವ ಅಧಿಕೃತರು ಮಂಗಳೂರಿಂದ ಅಲ್ಲಿಯ ಖಾಸಗೀ ಆಸ್ಪತ್ರೆಯ ಆಂಬುಲೆನ್ಸ್ ನ ಸಂಚಾರಕ್ಕೆ ಯಾವ ಕಾನೂನು ಬಳಸಿ ಅನುವು ನೀಡಿರುವರೆಂದು ಸಾರ್ವಜನಿಕರು ಪತ್ರಿಕೆಯೊಂದಿಗೆ ಅವಲತ್ತುಕೊಂಡಿರುವರು. ಜೊತೆಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಶುಶ್ರೂಶೆ ನೀಡುವ ಆಸ್ಪತ್ರೆ ನೌಕರರನ್ನು ಯಾವ ಸುರಕ್ಷತೆಯ ಆಧಾರದಲ್ಲಿ ಇಲ್ಲಿಂದ ಅಲ್ಲಿಗೂ-ಅಲ್ಲಿಂದ ಇಲ್ಲಿಗೂ ಕರೆಸಿಕೊಳ್ಳಲಾಗುತ್ತಿದೆ ಎನ್ನುವುದೂ ಆಶ್ಚರ್ಯ ಮತ್ತು ಸಂಶಯಗಳಿಗೆ ಎಡೆಮಾಡಿದೆ.



