ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಇದರಿಂದ ಕೊರೋನಾ ವೈರಸ್ ಸೋಂಕಿತರ ಏರಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಕೇವಲ 3.4 ದಿನದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಡಬಲ್ ಆಗುತ್ತಿತ್ತು. ಈಗ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 12.6 ದಿನಗಳು ಬೇಕಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ಮೂರು ದಿನಗಳಿಂದ ಕೊವಿಡ್-19 ಪ್ರಕರಣಗಳು ಡಬಲ್ ಆಗುವ ಪ್ರಮಾಣ ಸುಧಾರಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,525 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ. ಈ ಪೈಕಿ 24,386 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಯಿಂದ 122 ಮಂದಿ ಮೃತಪಟ್ಟಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 2415ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಈಗ ಶೇ. 3.2 ರಷ್ಟು ಇದ್ದು, ಚೇತರಿಕೆಯ ಪ್ರಮಾಣ ಶೇ. 32.8 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನಂತರ ಗುಜರಾತ್, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.


