ಬದಿಯಡ್ಕ: ಜಗವ್ಯಾಪ್ತಿ ಸಂಚಲನ ಸೃಷ್ಟಿಸಿ ಆತಂಕ ಮೂಡಿಸಿರುವ ಕೊರೊನೊ ಮಹಾಮಾರಿಯ ವಿರುದ್ದ ಸಮರೋಪಾದಿಯ ಕಾರ್ಯತಂತ್ರಗಳ ಮೂಲಕ ಇಂದು ಸೋಂಕು ನಿವಾರಣೆಯಲ್ಲಿ ಕಾರ್ಯತತ್ಪರವಾಗಿದೆ.
ಕೋವಿಡ್ ವಿರುದ್ದ ಚಟುವಟಿಕೆಗಳಲ್ಲಿ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು, ಪೋಲೀಸರು, ಜಿಲ್ಲಾಡಳಿತಗಳು ತನ್ನದೇ ಅಹರ್ನಿಶಿ ಕೊಡುಗೆಗಳ ಮೂಲಕ ಸೋಂಕು ಬಾಧಿತರ ಶೂಶ್ರುಶೆ, ಪರಿಚರಣೆ, ಜನಸಾಮಾನ್ಯರ ವಿವಿಧ ಅಗತ್ಯಗಳಿಗೆ ತಕ್ಕಂತೆ ಕಾರ್ಯನಿರತವಾಗಿದೆ. ಈ ಪೈಕಿ ವೈದ್ಯರು ಮತ್ತು ದಾದಿಯರ ಶ್ರಮ ಅತ್ಯಪೂರ್ವವಾಗಿ ಜನಮನ್ನಣೆ ಗಳಿಸುತ್ತಿದೆ.
ಇಂತಹ ಸಾಧನಾಶೀಲ ಸೇವೆಯಲ್ಲಿ ನಿರತರಾಗಿ ಜನಮನ್ನಣೆ ಗಳಿಸಿದವರಲ್ಲಿ ಬದಿಯಡ್ಕ ಸಮೀಪದ ಮಾನ್ಯದ ಯುವ ದಾದಿಯೊಬ್ಬರು ಕಾಞಂಗಾಡ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಬಾಧಿತರ ಮಧ್ಯೆ ಕೊರೊನಾ ವಾರಿಯರ್ಸ್ ಆಗಿ ಸಏವೆ ಸಲ್ಲಿಸುತ್ತಿರುವುದು ಇಂದಿನ ಜಟಿಲ ಸ್ಥಿತಿಯಲ್ಲೂ ತನ್ನೂರಿನ ಮಣ್ಣಿಗೂ, ಕುಟುಂಬಕ್ಕೂ ಹೆಮ್ಮೆಗೆ ಕಾರಣವಾಗಿದೆ.
ಮಾನ್ಯ ವೆಂಕಪ್ಪ ನಾಯ್ಕ್-ಸರಸ್ವತಿ ದಂಪತಿಗಳ ಪುತ್ರಿ ಭವ್ಯ ಎಂಬ ಯುವ ದಾದಿ ಕೊರೊನಾ ಆರಂಭ ಕಾಲದಿಂದಲೂ ಇಂದಿನವರೆಗೂ ಮನೆಗೂ ತೆರಳದೆ ಕೋವಿಡ್ ಬಾಧಿತರ ಜೊತೆಗಿದ್ದು ಸೇವಾ ತತ್ಪರತೆಯ ಸವಾಲನ್ನು ಸ್ವೀಕರಿಸಿ ಅಭಿಮಾನಕ್ಕೆ ಕಾರಣರಾದ ಗಡಿನಾಡ ಕನ್ನಡತಿಯೆಂಬುದು ಹೆಚ್ಚು ಹೆಮ್ಮೆ ತಂದಿದೆ.
ಆರು ವರ್ಷಗಳ ಹಿಂದೆ ಬಂದ್ಯೋಡು ಸಮೀಪದ ಧರ್ಮತ್ತಡ್ಕ ನಿವಾಸಿ, ಕರ್ನಾಟಕದ ಹುಬ್ಬಳ್ಳಿಯ ಖಾಸಗೀ ಸಂಸ್ಥೆಯೊಂದರ ಉದ್ಯೋಗಿ ಗುರುರಾಜ್ ಎಂಬವರನ್ನು ಭವ್ಯ ವಿವಾಹವಾಗಿ ಮೂರೂವರೆ ವರ್ಷ ಹರೆಯದ ಪೃಥಿಕ್ ಹಾಗೂ ಎರಡರ ಹರೆಯದ ಸೃಷ್ಟಿ ಎಂಬ ಪುತ್ರಿಯನ್ನೂ ಹೊಂದಿದ್ದಾರೆ. ಇವರನ್ನು ಮನೆಯಲ್ಲಿ ಬಿಟ್ಟು ಕಳೆದ ಎರಡು ತಿಂಗಳಿಂದಲೂ ಮನೆಗೆ ಬಾರದೆ ಕೊರೊನಾ ಸೋಂಕಿತರ ಸೇವೆಯಲ್ಲಿ ಭವ್ಯ ನಿರತರಾಗಿದ್ದಾರೆ.
ಏಳನೇ ತರಗತಿ ತನಕ ಮಾನ್ಯ ಜ್ಞಾನೋದತ ಶಾಲೆಯಲ್ಲೂ, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ಪೂರೈಸಿ ಕಾಸರಗೋಡು ನೆಲ್ಲಿಕುನ್ನು ಜಿವಿಎಚ್‍ಎಸ್‍ಎಸ್ ಹೆಣ್ಮಕ್ಕಳ ಶಾಲೆಯಲ್ಲಿ ಪ್ಲಸ್ ಟು ಹಾಗೂ ಮಂಗಳೂರಿನ ಕಾಲೇಜೊಂದರಲ್ಲಿ ಪದವಿ ಶಿಕ್ಷಣ ಪಡೆದು ಬಳಿಕ ಮಾಯಿಪ್ಪಾಡಿ ಡಯಟ್ ನಲ್ಲಿ ಶಿಕ್ಷಕ ತರಬೇತಿ ಪಡೆದುಕೊಂಡು ಆರು ವರ್ಷಗಳ ಕಾಲ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಇಸಿಜಿ ಮತ್ತು ಅಡಿಯೋಮೆಟ್ರಿ ಮೆಡಿಕಲ್ ತರಬೇತಿ ಪಡೆದು ಕಳೆದ ಒಂದು ವರ್ಷಗಳ ಹಿಂದೆ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಕಾಞÂಂಗಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉದ್ಯೋಗ ಪಡೆದುಕೊಂಡರು. ಪ್ರಸ್ತುತ ಕೋವಿಡ್ 19 ನಿಗ್ರಹ ವಿರುದ್ದ ಕಾರ್ಯನಿರತರಾಗಿರುವ ಭವ್ಯ ಅವರು ಬಡ ನಿರ್ಗತಿಕ ಕುಟುಂಬಗಳಿಗೆ ನಿತ್ಯೋಪಯೋಗಿ ಆಹಾರ ವಸ್ತುಗಳ ಇತರ ಸಾಮಗ್ರಿಗಳ ಕಿಟ್ ನೀಡುವಲ್ಲಿಯೂ ಕೈಲಾದ ನೆರವು ನೀಡುತ್ತಿದ್ದು ತನ್ನ ಕುಟುಂಬದಿಂದ ದೂರ ಉಳಿದು ಕಳೆದ ಎರಡು ತಿಂಗಳುಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಿರತರಾಗಿ ಇತರರಿಗೆ ಮಾದರಿಯಾಗಿರುವುದರ ಜೊತೆಗೆ ಹುಟ್ಟೂರಿಗೆ ಗರಿಮೆ ತಂದಿದ್ದಾರೆ.



