ಕಾಸರಗೋಡು: ಕರೊನಾ ವೈರಸ್ ಬಾಧೆಯಿಂದ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಪೂರ್ಣ ಕಾರ್ಯಕ್ರಮಗಳು ರದ್ದಾಗಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಆನ್‍ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸುವ ಮೂಲಕ ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಲತಾಣ ಗೂಗಲ್ ಮೀಟ್ ಮೂಲಕ ಪತ್ರಕರ್ತರೊಂದಿಗೆ ನೇರ ಸಂಪರ್ಕದೊಂದಿಗೆ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ನಿನ್ನೆ ಪತ್ರಿಕಾಗೋಷ್ಠಿ ನಡೆಸಿದರು.
ಕಾಸರಗೋಡಿನ ಹಿಂದುಳಿದಿರುವಿಕೆಯನ್ನು ಸರ್ಕಾರ ಶೀಘ್ರ ಪರಿಹರಿಸುವಂತೆ ಒತ್ತಾಯಿಸಿ ಕಾಸರಗೋಡು ಜಿಲ್ಲೆ ರೂಪೀಕರಣಗೊಂಡ ಮೇ 24ನೇ ತಾರೀಕಿನಿಂದ ನಿರಂತರ ಹೋರಾಟ ನಡೆಸಲಾಗುವುದು. ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗಳನ್ನು ಆಶ್ರಯಿಸುತ್ತಿರುವ ಕಾಸರಗೋಡಿನ ರೋಗಿಗಳು ಲಾಕ್ ಡೌನ್ ಸಂದರ್ಭ ಅತಿಯಾದ ಸಂಕಷ್ಟ ಅನುಭವಿಸುವಂತಾಗಿದೆ. ಕಾಸರಗೋಡಿಗೆ ಏಮ್ಸ್ ಆಸ್ಪತ್ರೆ ಮಂಜೂರುಗೊಳಿಸುವ ಬಗ್ಗೆ ಬಿಜೆಪಿ ಹೋರಾಟಕ್ಕೆ ಸಹಕಾರ ನೀಡಲಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಕೇರಳ ಸರ್ಕಾರ ಹೆಚ್ಚಿನ ಆದ್ಯತೆ ನೀಡುವಂತೆಯೂ ಅವರು ಆಗ್ರಹಿಸಿದ್ದಾರೆ.



