ಕಾಸರಗೋಡು: ಕೇರಳದಲ್ಲಿ ಮದ್ಯಪ್ರಿಯರಿಗೆ ಸರ್ಕಾರ ದೊಡ್ಡ ಶಾಕ್ ನೀಡಿದೆ. ವಿದೇಶಿ ಮದ್ಯಕ್ಕೆ ಕರೊನಾ ಸೆಸ್ ರೂಪದಲ್ಲಿ ಶೇ. 10ರಿಂದ 35ರಷ್ಟು ಹೆಚ್ಚಿನ ದರ ವಿಧಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಕೋವಿಡ್-19 ಸಂಕಷ್ಟದಿಂದ ಪಾರಾಗಲು ಹಾಗೂ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಬಿಯರ್ ಹಾಗೂ ವೈನ್‍ಗೆ ಶೇ. 10ಹಾಗೂ ಭಾರತೀಯ ನಿರ್ಮಿತ ವಿದೇಶಿ ಮದ್ಯಕ್ಕೆ ಶೇ. 35ರಷ್ಟು ಸೆಸ್ ವಿಧಿಸಲಾಗುವುದು. ಗರಿಷ್ಠ ಮೊತ್ತದ ಮದ್ಯಕ್ಕೆ ಶೇ.35ರಷ್ಟು ಸೆಸ್ ವಿಧಿಸಲಾಗುವುದು. ಈ ಬಗ್ಗೆ ಪ್ರತ್ಯೇಕ ಆಧ್ಯಾದೇಶ ಜಾರಿಗೊಳಿಸಲೂ ತೀರ್ಮಾನಿಸಲಾಗಿದೆ. ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ರಾಜ್ಯದಲ್ಲಿ ಮದ್ಯಮಾರಾಟ ಸ್ಥಗಿತಗೊಳಿಸಲಾಗಿದೆ. ಮದ್ಯಮಾರಾಟ ಆರಂಭದ ದಿನಾಂಕ ಇನ್ನೂ ನಿಗದಿಯಾಗಿಲ್ಲ.
ಮೇ 17 ರಂದು ಮೂರನೇ ಹಂತದ ಲಾಕ್‍ಡೌನ್ ಮುಗಿದ ಬಳಿಕ ಮದ್ಯ ಮಾರಾಟವನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ. ಕೇರಳವನ್ನು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಮದ್ಯ ಮಾರಾಟ ಪ್ರಾರಂಭವಾದಾಗ ಉದ್ಭವಿಸಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಆನ್‍ಲೈನ್ ಮದ್ಯ ಮಾರಾಟದ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ಉದ್ದೇಶಕ್ಕಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‍ಸೈಟ್ ರಚಿಸಲು ಕೇರಳ ಸ್ಟಾರ್ಟ್‍ಅಫ್ ಮಿಷನ್‍ಗೆ ಸೂಚನೆ ನೀಡಲಾಗಿದೆ.
ಬಾರ್‍ಗಳಿಂದ ಮದ್ಯದ ಪಾರ್ಸೆಲ್‍ಗಳನ್ನು ಒದಗಿಸಲು ಮತ್ತು ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಇದನ್ನು ನಿರ್ವಹಿಸಲು ಅಬಕಾರಿ ನಿಯಮಗಳನ್ನು ತಿದ್ದುಪಡಿ ಮಾಡಲಾಗುವುದು. ಬೆವ್ಕೊ ಮತ್ತು ಕನ್ಸ್ಯೂಮರ್ ಫೆಡ್ ಮಳಿಗೆಗಳು ಮದ್ಯ ತಯಾರಿಸಲು ಪ್ರಾರಂಭಿಸಿದ ಕೂಡಲೇ ಖಾಸಗಿ ಬಾರ್‍ಗಳಲ್ಲಿ ಮದ್ಯ ಮಾರಾಟವನ್ನು ಪ್ರಾರಂಭಿಸಲಿವೆ. ಬಾರ್‍ಗಳಿಂದ ಮದ್ಯವನ್ನು ಖರೀದಿಸಲು ಆನ್‍ಲೈನ್ ಟೋಕನ್ ವ್ಯವಸ್ಥೆಯನ್ನು ವ್ಯವಸ್ಥೆಗೊಳಿಸಲು ನಿರ್ಧರಿಸಲಾಗಿದೆ.
ವಿದೇಶಿ ಮದ್ಯವನ್ನು ಹೊರತುಪಡಿಸಿ ಎಲ್ಲಾ ರೀತಿಯ ಆಲ್ಕೊಹಾಲ್‍ಗಳ ದರ ಹೆಚ್ಚಾಗಬಹುದು. ಬಿಯರ್‍ಗೆ ಶೇ 10 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಇದಲ್ಲದೆ, 400 ರೂ.ಗಿಂತ ಹೆಚ್ಚಿನ ಬೆಲೆಯ ಮದ್ಯವು 35 ಶೇ. ಹೆಚ್ಚು ದರ ವಸೂಲುಮಾಡಲಿದೆ. 400 ರೂ.ಗಿಂತ ಕಡಿಮೆ ದರದಲ್ಲಿ ಶೇ.10 ರ ವರೆಗೆ ತೆರಿಗೆ ವಿಧಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.


