ಕಾಸರಗೋಡು: ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಸ್ ಟಿಕೆಟ್ ದರವನ್ನು ಶೇ. 50ರಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಸಾಮಾನ್ಯ ಬಸ್‍ಗಳಲ್ಲಿ ಕನಿಷ್ಠ ದರವನ್ನು 8ರಿಂದ 12ರೂ.ಹೆಚ್ಚಿಸಲಾಗಿದೆ. ಪ್ರಸಕ್ತ ಪ್ರತಿ ಕಿ.ಮೀ ಗೆ ಸಾಮಾನ್ಯ ಬಸ್‍ಗಳಲ್ಲಿ 70ಪೈಸೆಯಿದ್ದು, ಇದನ್ನು 1.10ರೂಗೆ ಏರಿಸಲಾಗಿದೆ.
ಪ್ರಯಾಣ ರಿಯಾಯಿತಿ ಪಾಸ್ ಹೊಂದಿದವರೂ ಏರಿಕೆಯಾದ ಮೊತ್ತದ ಅರ್ಧ ಮೊತ್ತ ನೀಡಬೇಕಾಗಿದೆ. ಬೋಟ್ ಪ್ರಯಾಣ ದರವನ್ನು ಶೇ. 33ರಷ್ಟು ಹೆಚ್ಚಿಸಲಾಗುವುದು. ನಾಲ್ಕನೇ ಹಂತದ ಲಾಕ್‍ಡೌನ್ ಕಾಲಾವಧಿಯಲ್ಲಿ ಜಿಲ್ಲೆಯೊಳಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಜಲಸಾರಿಗೆಯನ್ನೂ ಪುನಾರಂಭಿಸಲಾಗುವುದು. ಒಟ್ಟು ಸೀಟಿನ ಶೇ. 50ರಷ್ಟು ಪ್ರಯಾಣಿಕರನ್ನು ಕೊಂಡೊಯ್ಯಲು ಮಾತ್ರ ಅನುಮತಿ ನೀಡಲಾಗುವುದು. ಈ ಮಧ್ಯೆ ಅಂತಾರಾಜ್ಯ ಸಂಚಾರದ ಸಾರಿಗೆ ವ್ಯವಸ್ಥೆ ಪುನಾರಂಭ ವಿಳಂಬಗೊಳ್ಳುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

