ಕಾಸರಗೋಡು: ರಾಜ್ಯ ಸರ್ಕಾರ ತನ್ನ ಆಡಳಿತೆಯ 4ನೇ ವರ್ಷ ಪೂರ್ಣಗೊಳಿಸಿದೆ. ಈ ವೇಳೆ ಗಡಿನಾಡು ಕಾಸರಗೋಡು ಜಿಲ್ಲೆಗೂ ಗಮನಾರ್ಹ ಅಭಿವೃದ್ಧಿ ಒದಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ.
ಕಾಸರಗೋಡು ಜಿಲ್ಲೆ ಎಲ್ಲ ವಲಯಗಳಲ್ಲೂ ದಾಪುಗಾಲಿಡುತ್ತಿದೆ. ಅದರಲ್ಲೂ ಆರೋಗ್ಯ ವಲಯದಲ್ಲಿ ನಡೆಸಿರುವ ಸಾಧನೆ ಶ್ಲಾಘನೀಯವಾಗಿದೆ. ಈ ಹಂತದಲ್ಲಿ ಕಾಸರಗೋಡಿನ ಅನೇಕ ವರ್ಷಗಳ ಬೇಡಿಕೆಯಾಗಿದ್ದ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾಗಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಪರಿಣತ ಚಿಕಿತ್ಸೆಗಾಗಿ ಮಂಗಳೂರು ಸಹಿತ ಮಹಾ ನಗರಗಳ ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸುವುದು ಇಲ್ಲಿನ ಜನತೆಗೆ ಅನಿವಾರ್ಯವಾಗಿತ್ತು. ಈ ವೇಳೆ ನಡೆಯುವ ದುಬಾರಿ ವೆಚ್ಚ, ಪ್ರಯಾಣ ಇತ್ಯಾದಿ ಸಂಕಷ್ಟದ ನಡುವೆ ಸ್ವಂತ ನಾಡಲ್ಲಿ ಸರ್ಕಾರಿ ವಲಯದ ಮೆಡಿಕಲ್ ಕಾಲೇಜು ಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಕೇಳಿಬರುತ್ತಿತ್ತು. 2012 ಮಾರ್ಚ್ ತಿಂಗಳಲ್ಲಿ ಆಡಳಿತಾನುಮತಿ ಪಡೆದ ಮೆಡಿಕಲ್ ಕಾಲೇಜಿಗೆ 2013 ನ.30ರಂದು ಶಿಲಾನ್ಯಾಸ ನಡೆದಿತ್ತು. ನಂತರ ವಿವಿಧ ಕಾರಣಗಳಿಂದ ನಿರ್ಮಾಣ ಚಟುವಟಿಕೆಗಳು ವಿಳಂಬವಾಗುತ್ತಲೇ ಸಾಗಿತ್ತು. 4 ಅಂತಸ್ತಿನ ಅಕಾಡೆಮಿಕ್ ಬ್ಲಾಕ್ ನಿರ್ಮಾಣ ಕಳೆದ ಜನವರಿಯಲ್ಲಿ ಪೂರ್ತಿಗೊಂಡಿತ್ತು. ಇದಕ್ಕಾಗಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ 30 ಕೋಟಿ ರೂ. ವೆಚ್ಚಮಾಡಲಾಗಿತ್ತು. ಜೊತೆಗೆ ಸಿಬ್ಬಂದಿಗಾಗಿ ಕ್ವಾರ್ಟರ್ಸ್, ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಪ್ಯಾಕೇಜ್ ನಲ್ಲಿ 29.8 ಕೋಟಿ ರೂ. ಮೀಸಲಿರಿಸಲಾಗಿದೆ.
ಕುಡಿಯುವ ನೀರಿನ ಪ್ಲಾಂಟ್ ಸ್ಥಾಪನೆಗೆ 8 ಕೋಟಿ ರೂ.:
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ ಜಲ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಮೆಡಿಕಲ್ ಕಾಲೇಜಿಗೆ ಪ್ರಯಾಣ ಸೌಲಭ್ಯ ಸುಧಾರಿತಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನಡ್ಕ ಮೆಡಿಕಲ್ ಕಾಲೇಜು-ಏಳ್ಕಾನ ರಸ್ತೆ ಅಭಿವೃದ್ಧಿ ಗೊಳಿಸಲಾಗಿದೆ.
ಮೆಡಿಕಲ್ ಕಾಲೇಜಿಗಿರುವ ಮುಗು-ಮುಂಡ್ಯತ್ತಡ್ಕ ರಸ್ತೆ ನಿರ್ಮಾಣಕ್ಕೆ 10 ಕೋಟಿ ರೂ. ಟೆಂಡರ್ ಕ್ರಮ ಪೂರ್ಣಗೊಂಡಿದೆ. ಇತರ ತತ್ಸಂಬಂಧಿ ಚಟುವಟಿಕೆಗಳಿಗೂ ನಿಧಿ ಮೀಸಲಿರಿಸಿಲಾಗಿದೆ.
ಕೋವಿಡ್ ಮುಗ್ಗಟ್ಟಿಗೆ ಮೊದಲು ಮಾ.14ರಂದು ಮೆಡಿಕಲ್ ಕಾಲೇಜಿನ ಉದ್ಘಾಟನೆ ನಡೆಸುವುದಾಗಿ, ಆರೋಗ್ಯ ಸಚಿವ ಕೆ.ಕೆ.ಶೈಲಜಾ ಟೀಚರ್ ಅವರು ಉದ್ಘಾಟನೆ ನಡೆಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕಗೊಂಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರತ್ಯೇಕ ಆದೇಶ ಪ್ರಕಾರ 4 ದಿನಗಳಲ್ಲಿ ಮೆಡಿಕಲ್ ಕಾಲೇಜನ್ನು ಕೋವಿಡ್ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಲಾಗಿತ್ತು. ಔಪಚಾರಿಕ ಉದ್ಘಾಟನೆ ನಡೆಯದೆಯೇ ನಾಡು ಅನುಭವಿಸುತ್ತಿರುವ ಸಂಕಷ್ಟ ಪರಿಹಾರಕ್ಕೆ ನೇರವಾಗಿ ಮೆಡಿಕಲ್ ಕಾಲೇಜೊಂದು ಚಟುವಟಿಕೆನಡೆಸುವುದು ಇತಿಹಾಸದಲ್ಲೇ ಬಹು ಅಪರೂಪವಾಗಿದೆ. ಈ ವರೆಗೆ 45 ಮಂದಿ ಕೋವಿಡ್ ಸೋಂಕು ಖಚಿತಗೊಂಡು ಈ ಕಾಲೇಜಿನಲ್ಲಿ ದಾಖಲಾಗಿದ್ದು, 20 ಮಂದಿ ಪೂರ್ಣಗುಣಮುಖರಾಗಿ ತೆರಳಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಯೋಜನೆ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ತಿಳಿಸಿರುವರು.
ಬಹುಭಾಷಾ ಸಂಗಮಭೂಮಿ ಕಾಸರಗೋಡು ಜಿಲ್ಲೆಯಲ್ಲಿ ಶಿಕ್ಷಣ ವಲಯದ ಸಾಧನೆಗಳು ಗಮನಸೆಳೆಯುತ್ತವೆ. ಸ್ಮಾರ್ಟ್ ತರಗತಿಗಳ ಸಹಿತ ಅತ್ಯಉನಿಕ ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳು ಇಂದು ನಾಡಿನಲ್ಲಿವೆ. ಕನ್ನಡ,ಮಲೆಯಾಳಂ, ಇಂಗ್ಲೀಷ್ ಮಾಧ್ಯಮ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ಶಾಲೆಗಳು, ಕೇಂದ್ರೀಯ ವಿವಿ, ಆಯುರ್ವೇದ ಮೆಡಿಕಲ್ ಕಾಲೇಜು, ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜು ಸಹಿತ ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ಜಿಲ್ಲೆಯ ಎಲ್ಲ ವಲಯಗಳಲ್ಲೂ ಪ್ರೌಢಶಾಲೆಗಳಿವೆ. ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಜಾರಿಗೆ ಬಂದ ಮೇಲೆ ದೊಡ್ಡ ಕ್ರಾಂತಿ ನಡೆದಿವೆ. 2019 ರಲ್ಲಿ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಇಡೀ ರಾಜ್ಯದ ಮಹೋತ್ಸವವಾಗಿತ್ತು.
ಜಲ ಸಮೃದ್ಧಿ:
ಕುಡಿಯುವ ನೀರಿನ ಬರಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತ್ವರಿತ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆದಿವೆ. ಜೊತೆಗೆ ಜಿಲ್ಲೆಯಲ್ಲಿ ಭೂಗರ್ಭ ಜಲ ಸಂರಕ್ಷಣೆಗೂ ವಿವಿಧ ಯೋಜನೆಗಳು ಜಾರಿಗೆ ಬಮದಿವೆ. ರಾಜ್ಯ ಸರ್ಕಾರದ ಹರಿತ ಕೇರಳಂ ಯೋಜನೆಯ ಅಂಗವಾಗಿ ನದಿಗಳ ಸಹಿತ ಜಲಾಶಯಗಳ ಪುನಶ್ಚೇತನ ನಡೆಸಿರುವುದು ಈ ನಿಟ್ಟಿನಲ್ಲಿ ಗಮನಾರ್ಹ ಸಾಧನೆ. ಜಿಲ್ಲಾಧಿಕಾರಿ ಡಾ,ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯಿಂದ ಜಿಲ್ಲೆಯಲ್ಲಿ ಜಾರಿಗೊಳ್ಳುತ್ತಿರುವ ಬ್ಯಾಂಬೂ(ಬಿದಿರು) ಕ್ಯಾಪಿಟಲ್ ಯೋಜನೆ ದೇಶಕ್ಕೇ ಮಾದರಿಯಾದುದು. ರಾಷ್ಟ್ರೀಯ ನೌಕರಿ ಖಾತರಿ ಯೋಜನೆಯನ್ನು ಬಳಸಿ ಮಳೆ ನೀರು ಇಂಗು ಗುಂಡಿ, ಮಳೆ ನೀರ ಸಂರಕ್ಷಣೆ, ಬಾವಿಗಳ ಸಹಿತ ಜಲಾಶಯಗಳ ರೀಚಾರ್ಜ್ ಇತ್ಯಾದಿಗಳು ನೀಡಿದ ಯೋಗದಾನ ಸಣ್ಣದಲ್ಲ.
ಆರೋಗ್ಯ ವಲಯ:
ಕೋವಿಡ್ ಪ್ರತಿರೋಧ ಚಟುವಟಿಕೆಗಳು ಸಹಿತ ಆರೋಗ್ಯ ವಲಯದಲ್ಲಿ ಕಾಸರಗೋಡು ಜಿಲ್ಲೆ ನಡೆಸಿದ ಸಾಧನೆ ಜಗತ್ತಿಗೇ ಮಾದರಿಯಾಗಿದೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಉದ್ಘಾಟನೆ ನಡೆಸಲೂ ಕಾಯದೆ ಕೋವಿಡ್ ಚಿಕಿತ್ಸಾಲಯವಾಗಿ ಮಾರ್ಪಡಿಸಿ, ಪರಿಣಾಮಕಾರಿ ಫಲಿತಾಂಶ ಒದಗಿಸಿದ್ದು ಜಿಲ್ಲೆ 36 ವರ್ಷ ಪೂರ್ಣಗೊಳಿಸಿರುವ ವೇಳೆ ಶ್ಲಾಘನೀಯ ವಿಚಾರವಾಗಿದೆ. ಜಿಲ್ಲೆಯ 53 ಆರೋಗ್ಯ ಸಂಸ್ಥೆಗಳು ಸಾರ್ವಜನಿಕರ ಆರೋಗ್ಯ ಸೇವೆಯಲ್ಲಿ ದೊಡ್ಡ ಸಾಧನೆ ನಡೆಸುತ್ತಿವೆ. ಇದರ ಪರಿಣಾಮ 29 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಬಡ್ತಿ ಪಡೆದಿವೆ. ಕಾಞಂಗಾಡ್ ತಾಲೂಕು ಆಸ್ಪತ್ರೆ 1985ರಲ್ಲಿ ಆರಂಭಗೊಂಡಿದ್ದು, ಹಂತಹಂತವಾಗಿ ಅನೇಕ ಜನಪರ ಸಾಧನೆ ನಡೆಸಿದ್ದು, 2019ರ ವೇಳೆ ರಾಷ್ಟ್ರೀಯ ಮಟ್ಟದ ಕಾಯಕಲ್ಪ ಅಂಗೀಕಾರಕ್ಕೆ ಪಾತ್ರವಾಗಿದೆ. ಕಾಸರಗೋಡು ತಾಲೂಕು ಆಸ್ಪತ್ರೆ ಜನರಲ್ ಆಸ್ಪತ್ರೆಯಾಗಿ ಬಡ್ತಿ ಪಡೆದಿದೆ. ಡಯಾಲಿಸಿಸ್ ಸಹಿತ ಸೌಲಭ್ಯಗಳು ಇಂದು ಜಿಲ್ಲೆಯ ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿವೆ. ಟಾಟಾ ಸಮೂಹ ಸಂಸ್ಥೆಯ ಮಲ್ಟಿ ಸ್ಪಷ್ಯಾಲಿಟಿ ಆಸ್ಪತ್ರೆ ನಿರ್ಮಾಣ ತ್ವರಿತಗತಿಯಲ್ಲಿ ನಡೆಯುತ್ತಿದೆ.
ಎಂಡೋ ಸಂತ್ರಸ್ತರ ಸಾಂತ್ವನಕ್ಕೆ ರಾಜ್ಯ ಸರಕಾರ ವೆಚ್ಚ ಮಾಡಿದ್ದು 283 ಕೋಟಿ ರೂ.:
ಎಂಡೋಸಲ್ಫಾನ್ ಸಂತ್ರಸ್ತರ ಸಾಂತ್ವನಕ್ಕಾಗಿ ರಾಜ್ಯ ಸರ್ಕಾರ 283 ಕೋಟಿ ರೂ. ವೆಚ್ಚ ಮಾಡಿದೆ. ಈ ನಿಟ್ಟಿನಲ್ಲಿ ಆರ್ಥಿಕ ಸಹಾಯವಾಗಿ 171.10 ಕೋಟಿ ರೂ., ಚಿಕಿತ್ಸೆಗಾಗಿ 15.03 ಕೊಟಿ ರೂ., 2019-20 ನವೆಂಬರ್ ವರೆಗಿನ ಪಿಂಚಣಿ, ಆಶ್ವಾಸ ಕಿರಣ ಯೋಜನೆ, ವಿದ್ಯಾರ್ಥಿ ವೇತನ ಇತ್ಯಾದಿಗಳಿಗೆ 88.39 ಕೋಟಿ ರೂ., ಸಾಲ ಮನ್ನಾಕ್ಕಾಗಿ 6.82 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ ರಾಜ್ಯ ಬಜೆಟ್ ನಲ್ಲಿ 50 ಕೊಟಿ ರೂ. ಮಂಜೂರು ಮಾಡಲಾಗಿತ್ತು. ಈ ತಿಂಗಳಲ್ಲಿ ಮಾತ್ರ ಜಿಲ್ಲಾಧಿಕಾರಿ ಅವರ ನಿಧಿಯಿಂದ ಸಂತ್ರಸ್ತರ ಚಿಕಿತ್ಸೆ ಮತ್ತು ಔಷಧಕ್ಕಾಗಿ 2 ಕೊಟಿ ರೂ. ಒದಗಿಸಲಾಗಿತ್ತು.
ಈಗ 6728 ಮಂದಿ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿದ್ದಾರೆ. ಇವರಲ್ಲಿ 371 ಮಂದಿ ಹಾಸುಗೆ ಹಿಡಿದವರು, 1499 ಮಂದಿ ಬುದ್ಧಿ ಮಾಂದ್ಯತೆ ಇರುವವರು, 1189 ಮಂದಿ ವಿಶೇಷ ಚೇತನರು, 699 ಕ್ಯಾನ್ಸರ್ ಬಾಧಿತರು, ಇತರರು 2970 ಮಂದಿ ಪಟ್ಟಿಯಲ್ಲಿದ್ದಾರೆ.


