ಮಂಜೇಶ್ವರ: ನಿಗದಿತ ಮುಹೂರ್ತಕ್ಕೆ ವಿವಾಹವಾಗಲಾರದೆ ಅಂತರ್ ರಾಜ್ಯ ಗಡಿಯ ಆಚೀಚೆ ಬದಿ ವಧೂವರರು ಪರಸ್ಪರ ತಾಳಿಕಟ್ಟಲು ತಯಾರಾದ ಘಟನೆ ನಡೆದಿದೆ.
ಮುಳ್ಳೇರಿಯ ನಿವಾಸಿ ಪುಷ್ಪರಾಜ್ ಎಂಬವರ ವಿವಾಹ ಮಂಗಳೂರಿನ ವಿಮಲ ಎಂಬವರೊಂದಿಗೆ ಸೋಮವಾರ ವರನ ಮನೆಯಲ್ಲಿ ನಿಗದಿಯಾಗಿತ್ತು. ವಧುವಿನ ಕಡೆಯವರು ಮತ್ತು ಪುಷ್ಪರಾಜ್ ಈ ಹಿಂದೆಯೇ ಹಲವು ಬಾರಿ ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಪಾಸ್ ಗಾಗಿ ಅರ್ಜಿಸಲ್ಲಿಸಿದ್ದರು. ಆದರೆ ಸೋಮವಾರದ ವರೆಗೂ ಪಾಸ್ ನೀಡಿರಲಿಲ್ಲ.
ಈ ಮಧ್ಯೆ ಸೋಮವಾರ ವಧುವಿನ ಕಡೆಯವರು ವಿವಾಹ ಕಾರ್ಯನಿರ್ವಹಿಸಲು ತಲಪ್ಪಾಡಿ ಗಡಿಯ ಮೂಲಕ ಆಗಮಿಸಿದಾಗ ಪಾಸ್ ಇಲ್ಲದಿರುವುದರಿಂದ ಅಧಿಕೃತರು ತಡೆಹಿಡಿದರು. ವರನ ಕಡೆಯವರು ಪರಿಪರಿಯಿಂದ ವಿನಂತಿಸಿದರೂ ವಧುವನ್ನು ವರನ ಕೈಹಿಡಿಯಲು ಸಮ್ಮತಿಸಲಿಲ್ಲ. ಗಡಿಯಾಚೆಗೆ ವಧುವೂ ಗಡಿಯ ಈಚೆ ವರನೂ ದಾರಿ ಕಾಣದೆ ಮುಹೂರ್ತದ ಹೊತ್ತು ಸಮೀಪಿಸುತ್ತಿರುವಂತೆ(11 ಗಂಟೆಗೆ) ಹೆದ್ದಾರಿಯಲ್ಲೇ ಹಸೆಮಣೆ ಏರಲು ಸಾಂಕೇತಿಕವಾಗಿ ನಿರ್ಧರಿಸಿದರೂ ವರನ ತಾಯಿಯ ಅನುಪಸ್ಥಿತಿಯಿಂದ ಆ ನಿರ್ಧಾರವನ್ನು ಕೈಬಿಟ್ಟರು. ಬಳಿಕ ನಡೆದ ನಿರಂತರ ಸಂಧಾನದ ಫಲವಾಗಿ ಅಪರಾಹ್ನ 4ರ ವೇಳೆಗೆ ಕೊನೆಗೂ ಜಿಲ್ಲಾಡಳಿತ ವಧುವಿನ ಕೇರಳ ಆಗಮನಕ್ಕೆ ಅನುಮತಿಸಿತು.
ಬಳಿಕ ರಾತ್ರಿ 7ರ ವೇಳೆ ವರನ ಮುಳ್ಳೇರಿಯದ ಸ್ವಗೃಹದಲ್ಲಿ ವಿವಾಹ ಕಾರ್ಯ ನೆರವೇರಿತು. ಆದರೆ ವಧುವಿಗೆ 14 ದಿನಗಳ ಕ್ವಾರಂಟೈನ್ ವಿಧಿಸಿರುವುದಾಗಿ ತಿಳಿದುಬಂದಿದೆ.


