ಕಾಸರಗೋಡು: ಕಾಸರಗೋಡು ಜಿಲ್ಲೆಯ ಅಂಗನವಾಡಿ ಕಾರ್ಯಕರ್ತರು ಮುಖ್ಯಮಂತ್ರಿ ದುರಂತ ನಿವಾರಣೆ ನಿಧಿಗೆ 4.67 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಕೋವಿಡ್ ಪರಿಣಾಮ ಮುಗ್ಗಟ್ಟಿನ ಬದುಕು ಅನುಭವಿಸುತ್ತಿದ್ದರೂ, ಪ್ರತಿರೋಧ ಚಟುವಟಿಕೆಗಳಲ್ಲಿ ಅಹೋರಾತ್ರಿ ದುಡಿಮೆ ನಡೆಸುತ್ತಿದ್ದರೂ, ಸ್ವಯಂ ಪ್ರೇರಣೆಯಿಂದ ದೊಡ್ಡ ಮೊಬಲಗು ಹಸ್ತಾಂತರಿಸುವ ಮೂಲಕ ಗಮನಾರ್ಹ ಯೋಗದಾನವನ್ನು ಈ ವಲಯದ ಕಾರ್ಯಕರ್ತು ನಾಡಿಗೆ ಸಲ್ಲಿಸಿದ್ದಾರೆ.
ಜಿಲ್ಲೆಯ ವಿವಿಧ ವಲಯಗಳ ಅಂಗನವಾಡಿ ಸಿಬ್ಬಂದಿ ಮತ್ತು ಸಹಾಯಕರು ಈ ನಿಟ್ಟಿನಲಿ 4,67,550 ರೂ. ಸಂಗ್ರಹಿಸಿ ಸಲ್ಲಿಸಿರುವುದಾಗಿ ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ತಿಳಿಸಿದರು. ಈ ನಿಟ್ಟಿನಲ್ಲಿ ಅತ್ಯಧಿಕ ಮೊಬಲಗು ಕಾಞಂಗಾಡ್ ಮತ್ತು ಪರಪ್ಪ ಬ್ಲಾಕ್ ಗಳಿಂದ ಲಭಿಸಿದೆ. ಕಾಞಂಗಾಡಿನಿಂದ 46 ಸಾವಿರ ರೂ., ಕಾಞಂಗಾಡ್ ಅಡೀಷನಲ್ ನಿಂದ 1,02,100 ರೂ., ಪರಪ್ಪದಿಂದ 60,600 ರೂ, ಪರಪ್ಪ ಅಡೀಷನಲ್ ನಿಂದ 70,600 ರೂ. ನೀಡಿದ್ದಾರೆ. ನೀಲೇಶ್ವರ ಅಡೀಷನಲ್ ನಿಂದ 61,750 ರೂ., ಕಾರಡ್ಕ ಅಡೀಷನಲ್ ನಿಂದ 61 ಸಾವಿರ ರೂ. ಲಭಿಸಿದೆ.
ತಮ್ಮ ತಮ್ಮ ವ್ಯಾಪ್ತಿಯ ಅರ್ಹ ಕುಟುಂಬಗಳಿಗೆ ಆಹಾರ ಧಾನ್ಯ , ಏಕಾಂಗಿಯಾಗಿ ಬದುಕುತ್ತಿರುವವರಿಗೆ ಅಗತ್ಯದ ಸೇವೆ ಒದಗಿಸುವುದು, ಕ್ಯಾನ್ಸರ್ ರೋಗಿಗಳಿಗೆ ಜೀವರಕ್ಷಣೆ ಔಷಧ ವಿತರಣೆ, ಕೋವಿಡ್ ಪ್ರತಿರೋಧ ಚಟುವಟಿಕೆಗಳು ಹೀಗೆ ವಿವಿಧ ಮಜಲುಗಳಲ್ಲಿ ಅಂಗನವಾಡಿ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ.


