ಆಗಂತುಕ*
ಕಾಂಚಾಣದ ಮದವೇರಿದ
ಗೂಳಿಗಳ ಅಡ್ಡಾಡಿಸಿದವ
ಇವನ್ಯಾರು......
ಬಡವ ಬಲ್ಲಿದನೆಂದವಗಣಿಸಿದವನ
ದರ್ಪವನು ಮೆಟ್ಟಿ ನಿಂತವ
ಇವನ್ಯಾರು.........
ತಿನ್ನೋ ಅನ್ನಕೆ ಬೆಲೆತೆತ್ತವಗೆ
ಬೆಲೆ ತೆರದವನ ತಲೆ ಬಗ್ಗಿಸಿದವ
ಇವನ್ಯಾರು.......
ತಾನೇ ಮಿಗಿಲು ತನಗಿಂತ ಮಿಗಿಲಿಲ್ಲ ಎಂದವನ
ದನಿಯಡಗಿಸಿದವ
ಇವನ್ಯಾರು........
ತನ್ನೂರು ತನಗೆ ಸೇರಲ್ಲ
ಪರದೇಶ ಎನ್ನ ಸಲಹುವುದೆಂದು ಸ್ವಪ್ನ ಕಂಡವನ ನಿದ್ದೆಗೆಡಿಸಿದವ
ಇವನ್ಯಾರು........
ಹುಚ್ಚು ಜ್ಞಾನವ ದಾಳವಾಗಿಸಿ
ಪಗಡೆಯಾಡಿದ ಹಿರಿಯಣ್ಣನ
ಕುರ್ಚಿಯನಲುಗಾಡಿಸಿದವ
ಇವನ್ಯಾರು.........
ತಾನು ಬಿಟ್ಟ ಬಾಣ
ತನಗೇ ತಿರುಗು ಬಾಣ
ಎಂದರಿತ ಮನುಜನ ಮುಖ ಮುಚ್ಚಿದವ
ಇವನ್ಯಾರು......
ತನ್ನರಿವು ತನಗೇ ವಿಷವೋ
ಎಂದು ಇನ್ನೂ ಅರಿಯದ
ಮನುಜನ ಆಡಿಸುವವ
ಇವನ್ಯಾರು......
ಪಾಠ ಕಲಿಯದ ಮನುಜ
ಎತ್ತ ಸಾಗುವನೋ ಮುಂದೆ
ಎಂದು ಕೇಕೆ ಹಾಕುವವ
ಇವನ್ಯಾರು.....
ಇವನಾರೆಂದರಿಯದ ನಾವು
ಕೂಗಿದೆವು ಕೊರೊನಾ.....
ನಮ್ಮನ್ನರಿತ ಇವ ಮಾಡಿ ಹೋದ ವಿಶ್ವ ಸ್ಮಶಾನ........


