ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮಹತ್ವದ ತಿರುವು ಸಂಭವಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಭದ್ರಕೋಟೆ ಭಬಾನಿಪುರ ವಿಧಾನಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದಾರೆ. 'ದೀದಿ' ವಿರುದ್ಧ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು 15,114 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಟಿಎಂಸಿ ಮುಖ್ಯಸ್ಥೆಗೆ ಇದು ಎರಡನೇ ಆಘಾತವಾಗಿದೆ.
ಇಂದು(ಸೋಮವಾರ) ನಡೆದ ಭಾರೀ ಕುತೂಹಲ ಕೆರಳಿಸಿದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಿಕ ಹಂತಗಳಲ್ಲಿ ಮಮತಾ ಬ್ಯಾನರ್ಜಿ ಸ್ಪಷ್ಟ ಮುನ್ನಡೆ ಸಾಧಿಸಿದ್ದರು. ಏಳನೇ ಸುತ್ತಿನ ಅಂತ್ಯದ ವೇಳೆಗೆ ಅವರು 32,822 ಮತಗಳನ್ನು ಪಡೆದು 17,000 ಕ್ಕೂ ಹೆಚ್ಚು ಮತಗಳ ಮುನ್ನಡೆಯಲ್ಲಿದ್ದರು. ಅದೇ ವೇಳೆಗೆ ಸುವೇಂದು ಅಧಿಕಾರಿ 15,451 ಮತಗಳನ್ನು ಪಡೆದಿದ್ದರು. ಆದರೆ ನಂತರದ ಸುತ್ತುಗಳಲ್ಲಿ ಈ ಅಂತರ ಕ್ರಮೇಣ ಕುಗ್ಗತೊಡಗಿತು.
ಎಂಟನೇ ಸುತ್ತಿನ ಬಳಿಕ ಮುನ್ನಡೆ 15,494 ಕ್ಕೆ ಇಳಿದರೆ, 10ನೇ ಸುತ್ತಿನ ವೇಳೆಗೆ 12,131 ಕ್ಕೆ ಕುಸಿತವಾಯಿತು. 12ನೇ ಸುತ್ತಿನ ಅಂತ್ಯದ ವೇಳೆಗೆ 7,184 ಕ್ಕೆ ಇಳಿದ ಅಂತರವು, 14ನೇ ಸುತ್ತಿನ ವೇಳೆಗೆ ಕೇವಲ 3,830 ಮತಗಳಿಗೆ ಸೀಮಿತವಾಯಿತು. ನಂತರದ ಸುತ್ತುಗಳಲ್ಲಿ ಸುವೇಂದು ಅಧಿಕಾರಿ ಮುನ್ನಡೆಯನ್ನು ಪಡೆದು ಅಂತಿಮವಾಗಿ ಗೆಲುವು ಸಾಧಿಸಿದರು.
ಎಣಿಕೆಯ 18ನೇ ಸುತ್ತಿನ ವೇಳೆಗೆ ಮಮತಾ ಬ್ಯಾನರ್ಜಿ 11,000 ಕ್ಕೂ ಹೆಚ್ಚು ಮತಗಳಿಂದ ಹಿನ್ನಡೆಯಲ್ಲಿದ್ದರು. ಮೊದಲ ಸುತ್ತಿನಲ್ಲಿ 1,996 ಮತಗಳ ಮುನ್ನಡೆಯೊಂದಿಗೆ ಆರಂಭಿಸಿದ್ದ ಅವರು, ಎರಡನೇ ಸುತ್ತಿನಲ್ಲಿ ಹಿನ್ನಡೆ ಎದುರಿಸಿದರೂ, ಮೂರನೇ ಸುತ್ತಿನಲ್ಲಿ ಮತ್ತೆ ಮುನ್ನಡೆ ಪಡೆದಿದ್ದರು. ಆದರೆ ಆ ಮುನ್ನಡೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಭಬಾನಿಪುರ ಕ್ಷೇತ್ರವು ದಿನವಿಡೀ ತೀವ್ರ ರಾಜಕೀಯ ಚಟುವಟಿಕೆಗೆ ಸಾಕ್ಷಿಯಾಯಿತು. ಇಬ್ಬರು ನಾಯಕರೂ ಸಖಾವತ್ ಸ್ಮಾರಕ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಎಣಿಕೆ ಕೇಂದ್ರದಲ್ಲಿ ಹಾಜರಿದ್ದರು. ರಾಜ್ಯಾದ್ಯಂತ ಬಿಜೆಪಿ ಪರವಾದ ಟ್ರೆಂಡ್ ನಡುವೆ ಈ ಕ್ಷೇತ್ರದ ಫಲಿತಾಂಶವು ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು.

