ನವದೆಹಲಿ: 'ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 90ರಿಂದ 100 ಸ್ಥಾನಗಳನ್ನು ಗೆಲ್ಲಲಿದೆ ಎಂದು ನಾವು ಹೇಳಿದಾಗ, ನಮ್ಮನ್ನು ನೋಡಿ ಎಲ್ಲರೂ ನಗುತ್ತಿದ್ದರು' ಎಂದು 'ಆಕ್ಸಿಸ್ ಮೈ ಇಂಡಿಯಾ'ದ ಮುಖ್ಯಸ್ಥ ಪ್ರದೀಪ್ ಗುಪ್ತಾ ಹೇಳಿದ್ದಾರೆ.
ಮತದಾನೋತ್ತರ ಸಮೀಕ್ಷೆ ಪ್ರಕಟಿಸಿದ್ದ 'ಆಕ್ಸಿಸ್ ಮೈ ಇಂಡಿಯಾ', ಟಿವಿಕೆ 90ರಿಂದ 100 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು.
ತಮಿಳುನಾಡಿನಲ್ಲಿ ವಿಜಯ್ ಪಕ್ಷವು ಮುನ್ನಡೆ ಕಾಯ್ದುಕೊಂಡಿರುವ ಬಗ್ಗೆ ಸುದ್ದಿಸಂಸ್ಥೆ ಎನ್‌ಡಿಟಿವಿ ಜತೆ ಮಾತನಾಡಿದ ಗುಪ್ತಾ, 'ಇದು ನಮ್ಮ ಸಮೀಕ್ಷೆಗೆ ಸಿಕ್ಕ ಜಯ' ಎಂದು ಹೇಳಿದ್ದಾರೆ.
'ಇತರ ಸಂಸ್ಥೆಗಳು ಏಕೆ ಭವಿಷ್ಯ ನುಡಿಯಲು ಸಾಧ್ಯವಾಗಲಿಲ್ಲ ಎಂಬುದು ನಿಮಗೆ ಈಗ ತಿಳಿಯುತ್ತದೆ. ಏಕೆಂದರೆ ನಾವು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತೇವೆ' ಎಂದು ಹೇಳಿದ್ದಾರೆ.
'ದೇಶದಾದ್ಯಂತ ಯಾರೂ ಇದನ್ನು ನಂಬುತ್ತಿರಲಿಲ್ಲ. ನಾವು ತಮಿಳುನಾಡು ಫಲಿತಾಂಶ ಮತ್ತು ಅದರಲ್ಲೂ ವಿಶೇಷವಾಗಿ ವಿಜಯ್ ಅವರ ವಿಜಯವನ್ನು ಈ ರೀತಿ ಭವಿಷ್ಯ ನುಡಿದಾಗ, ರಾಜಕೀಯ ಪಂಡಿತರು, ಇತರ ಮತದಾನ ಸಂಸ್ಥೆಗಳು ನಮ್ಮನ್ನು ನೋಡಿ ನಗುತ್ತಿದ್ದರು' ಎಂದು ಅವರು ಹೇಳಿದ್ದಾರೆ.

