ಕಾಸರಗೋಡು: ಕೋವಿಡ್ ಪ್ರತಿರೋಧ ಕ್ರಮಗಳ ಅಂಗವಾಗಿ ತಲಪ್ಪಾಡಿ ಗಡಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಹೆಲ್ಪ್ ಡೆಸ್ಕ್ ಗಳಲ್ಲದೆ ಶಾಶ್ವತ ಹೆಲ್ಪ್ ಡೆಸ್ಕ್ ಸೌಲಭ್ಯ ಜಾರಿಗೊಳಿಸಲಾಗುವುದು. ಇದಕ್ಕಾಗಿ ತಲಪ್ಪಾಡಿ ಕ್ಯಾಂಡ್ ಅಕ್ವಿಸಿಷನ್ ನ ರಸ್ತೆಯಲ್ಲಿರುವ ಪ್ಲೈವುಡ್ ಕಾರ್ಖಾನೆಯನ್ನು ಸರಕಾರ ವಹಿಸಿ ಕೇಂದ್ರ ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಕಾಲಿಕಡವು ಗಡಿಯಲ್ಲೂ ಹೆಲ್ಪ್ ಡೆಸ್ಕ್ ಗಳನ್ನು ಸಜ್ಜುಗೊಳಿಸಲು ದೀರ್ಘಾವಧಿ ಯೋಜನೆಗಳೊಂದಿಗೆ ಸೌಲಭ್ಯ ಸಿದ್ಧಪಡಿಸಲು ತೀರಾನಿಸಲಾಗಿದೆ.
ತಲಪ್ಪಾಡಿ ಗಡಿಯಲ್ಲಿ ಸಜ್ಜುಗೊಳಿಸಿದ ಹೆಲ್ಪ್ ಡೆಸ್ಕ್ ಕೇಂದ್ರಗಳನ್ನು 6 ಕೌಂಟರ್ ಗಳಾಗಿ ಕಡಿತಗೊಳಿಸಲಾಗುವುದು. ಇಲ್ಲಿ ಡಾಟಾ ಎಂಟ್ರಿ ನಡೆಸುವ ಉದ್ದೇಶದಿಂದ ಶಿಕ್ಷಕರ ಸೇವೆ ಲಭ್ಯತೆ ಖಚಿತಪಡಿಸಲು ಮತ್ತು ಅವರಿಗೆ ಅಗತ್ಯವಿರುವ ತರಬೇತಿ ನೀಡಲೂ ತಿರ್ಮಾನಿಸಲಾಗಿದೆ. ಹೆಲ್ಪ್ ಡೆಸ್ಕ್ ಕೇಂದ್ರಗಳಲ್ಲಿ ಸ್ಪಾಟ್ ರೆಜಿಸ್ಟ್ರೇಷನ್ ನಡೆಸುವ ನಿಟ್ಟಿನಲ್ಲಿ ಪ್ರತಿವಾರ ತಲಾ ಒಬ್ಬ ಅಕ್ಷಯ ಕೇಂದ್ರದ ಸಿಬ್ಬಂದಿಯ ಉಚಿತ ಸೇವೆ ಲಭಿಸಲಿದೆ. ಗಡಿಯ ಹೆಲ್ಪ್ ಡೆಸ್ಕ್ ಕೇಂದ್ರಗಳಲ್ಲಿ ಕೆ.ಎಸ್.ಇ.ಬಿ.ಯ ತಾತ್ಕಾಲಿಕ ಸಂಪರ್ಕ, ಇಂಟರ್ ನೆಟ್ ಲಭ್ಯತೆಗೆ ತೀರ್ಮಾನ ಕೈಗೊಳ್ಳಲಾಗಿದೆ. ವಿದ್ಯುತ್ ವ್ಯತ್ಯಯ ಸಂಭವಿಸಿದರೆ ಅಗತ್ಯವಿರುವ ಜನರೇಟರ್ ಸರಕಾರಿ ಸಂಸ್ಥೆಗಳಿಂದ/ ಸ್ವಯ ಸೇವಾ ಸಂಘಟನೆಗಳಿಂದ ಒದಗಿಸಲಾಗುವುದು.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಉಪ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಎ.ಟಿ.ಮನೋಜ್, ಇತರ ಜಿಲ್ಲಾ ಮಟ್ಟದ ಮುಖ್ಯಸ್ಥರು ಉಪಸ್ಥಿತರಿದ್ದರು.


