ಕಾಸರಗೋಡು : ಜಿಲ್ಲೆಯಲ್ಲಿ ಮುದ್ರಣ ಸಂಸ್ಥೆಗಳು ತೆರೆದು ಎಲ್ಲಾ ದಿನಗಳಲ್ಲಿ ಕಾರ್ಯಾಚರಿಸುವಂತೆ ಅನುಮತಿ ನೀಡುವ ಬಗ್ಗೆ ಕೇರಳ ಪ್ರಿಂಟರ್ಸ್ ಅಸೊಸಿಯೇಷನ್ ಕಾಸರಗೋಡು ವಲಯ ಸಮಿತಿಯು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು IಂS ಅವರಿಗೆ ಮನವಿಯನ್ನು ನೀಡಿ ವಿನಂತಿಸಿದೆ.
ಕೋವಿಡ್ 19 ಲಾಕ್ ಡೌನ್ ಘೋಷಿಸಿದ ನಂತರ ಲಾಕ್‍ಡೌನ್ ಹಂತ 3 ಆದರೂ ಮುದ್ರಣ ಸಂಸ್ಥೆಯ ಮಾಲಕರು ಇಂದಿನವರೆಗೂ ತಮ್ಮ ತಮ್ಮ ಸಂಸ್ಥೆಗಳನ್ನು ಮುಚ್ಚಿ ಸರಕಾರದ ನಿರ್ದೇಶನಗಳಿಗೂ ನಿಯಂತ್ರಣಗಳಿಗೂ ವಿಧೇಯವಾಗಿ ಮನೆಯಲ್ಲಿಯೇ ಇರುವ ಶ್ರಮಿಕ ವರ್ಗದವರು. ಪ್ರತಿಯೊಂದು ಮುದ್ರಣ ಸಂಸ್ಥೆಯಲ್ಲೂ ಹಲವು ಲಕ್ಷ ಮೌಲ್ಯವುಳ್ಳ ಯಂತ್ರೋಪಕರಣಗಳು ಇದರಿಂದಾಗಿ ನಿಶ್ಚಲವಾಗಿವೆ. ಲಾಕ್‍ಡೌನ್ 3ನೇ ಹಂತದಿಂದ ಹಲವಾರು ವಿಭಾಗಗಳಿಗೆ ನಿಯಂತ್ರಣ ವಿಧೇಯವಾಗಿ ಸಂಸ್ಥೆಗಳನ್ನು ತೆರೆದು ಕಾರ್ಯಾಚರಿಸಲು ಸರಕಾರವು ಅನುಮತಿ ನೀಡಿದ ಸಂದರ್ಭದಲ್ಲಿ ಮುದ್ರಣ ವಲಯವನ್ನು ಗಮನಕ್ಕೆ ತೆಗೆದುಕೊಂಡಿರಲಿಲ್ಲ.
"ನಮ್ಮ ಸಂಸ್ಥೆಗಳು ಕೈಗಾರಿಕಾ ಇಲಾಖೆಯ ಎಂ.ಎಸ್.ಎಂ.ಇ (ಒSಒಇ) ರಿಜಿಸ್ಟ್ರೇಷನ್ ಪ್ರಕಾರ ಕಾರ್ಯಾಚರಿಸುವವುಗಳಾಗಿವೆ. ಆದರೂ ಮುದ್ರಣ ಸಂಸ್ಥೆಗಳಿಗೆ ಎಲ್ಲಾ ಮಂಗಳವಾರ ಶುಚಿಗೊಳಿಸಲು ಮಾತ್ರವೇ ಸರಕಾರ ಅನುಮತಿಯನ್ನು ನೀಡಿರುತ್ತದೆ. ಲಾಕ್ ಡೌನ್‍ನಿಂದಾಗಿ ಮುದ್ರಣ ವಲಯವು ಸಂಪೂರ್ಣ ನಿಶ್ಚಲಾವಸ್ಥೆಯಲ್ಲಿದೆ. ಜೀವನಕ್ಕೆ ಅನ್ಯ ಮಾರ್ಗವಿಲ್ಲದೆ ಪರಿತಪಿಸುತ್ತಿದ್ದೇವೆ. ಶಾಲೆಗಳು ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಸಾಧ್ಯತೆ ಇರುವುದರಿಂದಲೂ, ಇತರ ಸಂಸ್ಥೆಗಳು, ಅಂಗಡಿಗಳು ತೆರೆದು ಕಾರ್ಯಾಚರಿಸುತ್ತಿರುವುದರಿಂದಲೂ ಜಿ ಎಸ್ ಟಿ ಬಿಲ್‍ಗಳು, ಆಸ್ಪತ್ರೆ ಬಿಲ್ ಗಳು, ಲೆಟರ್ ಹೆಡ್, ಅರ್ಜಿ ಫಾರಂಗಳು ಮುಂತಾದವುಗಳಿಗೆ ಗ್ರಾಹಕರು ನಮ್ಮನ್ನು ನಿರಂತರ ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದಾರೆ. ಕಾಸರಗೋಡು ವಲಯ ಸಮಿತಿಯ ಪರಿಧಿಯೊಳಗಿರುವ ಕೋ-ಓಪರೇಟಿವ್ ಮುದ್ರಣ ಸಂಸ್ಥೆಗಳು ಭಾನುವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲೂ ಕೆಲಸಮಾಡುತ್ತಿವೆ. ಕೋ-ಓಪರೇಟಿವ್ ಮುದ್ರಣ ಸಂಸ್ಥೆಗಳು ಮಾತ್ರ ಕಾರ್ಯಾಚರಿಸುತ್ತಿರುವ ಕಾರಣದಿಂದಾಗಿ ನಮ್ಮ ಕೆಲಸಗಳು ನಮ್ಮಿಂದ ಹೊರಹೋಗುವ ಸಾಧ್ಯತೆ ಇದೆ. ಹಾಗಾದಲ್ಲಿ ಸಂಸ್ಥೆಯ ಮಾಲಕರೂ ನಮ್ಮನ್ನೇ ಆಶ್ರಯಿಸಿರುವ, ಈ ವಲಯದಲ್ಲಿ ಅನೇಕ ವರ್ಷಗಳಿಂದ ಕೆಲಸಮಾಡುತ್ತಿರುವ ಹಲವು ಕೆಲಸಗಾರರು ಹಾಗೂ ಅವರ ಕುಟುಂಬಗಳು ಬೀದಿಪಾಲಾಗಬಹುದು" ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಹಕರ ದಟ್ಟಣೆಯಿಂದ ರೋಗ ಪಸರಿಸಲು ಸಾಧ್ಯತೆಯಿರುವ ಫ್ಯಾನ್ಸಿ, ಟೆಕ್ಸ್ ಟೈಲ್ಸ್, ಫೂಟ್ ವೇರ್ಸ್ ಮುಂತಾದ ಸಂಸ್ಥೆಗಳಿಗೆ ನಿಯಂತ್ರಣ ವಿಧೇಯವಾಗಿ ತೆರೆಯಲು ಅನುಮತಿ ನೀಡಿರುವ ಕಾರಣದಿಂದಾಗಿ ಗ್ರಾಹಕರ ದಟ್ಟಣೆ ಏನೇನೂ ಇಲ್ಲದಿರುವ ಮುದ್ರಣ ವಲಯವನ್ನು ಗಣನೆಗೆ ತೆಗೆದುಕೊಂಡು ಎಲ್ಲಾ ದಿನಗಳಲ್ಲೂ ನಿಯಮಿತ ಕೆಲಸಗಾರರೊಂದಿಗೆ ಸಂಸ್ಥೆಗಳನ್ನು ತೆರೆದು ಕೆಲಸಮಾಡುವಂತೆ ತಮ್ಮಿಂದ ಅಗತ್ಯವಿರುವ ಕ್ರಮಗಳನ್ನು ಸ್ವೀಕರಿಸಬೇಕೆಂದು ಕೇರಳ ಪ್ರಿಂಟರ್ಸ್ ಅಸೋಸೊಯೇಶನ್ ಕಾಸರಗೋಡು ವಲಯ ಸಮಿತಿಯ ಕಾರ್ಯದರ್ಶಿ ಪ್ರಜಿತ್ ಮೇಲತ್ ಮನವಿ ನೀಡಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಕೇರಳ ಪ್ರಿಂಟರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾಧ್ಯಕ್ಷ ಮುಜೀಬ್ ಅಹಮ್ಮದ್ ಉಪಸ್ಥಿತರಿದ್ದರು.


