ಕಾಸರಗೋಡು: ಸುಭಿಕ್ಷ ಕೇರಳಂ ಯೋಜನೆ ಪ್ರಕಾರ ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಜಾಗದಲ್ಲೂ ಕೃಷಿ ನಡೆಸಲು ಸಿದ್ಧತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುಭಿಕ್ಷ ಕೇರಳಂ ಯೋಜನೆಯ ಜಿಲ್ಲಾ ಮಟ್ಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಷ್ಟು ಎಕ್ರೆ ಜಾಗದಲ್ಲಿ ಕೃಷಿ ನಡೆಸಲಾಗಿದೆ ಎಂಬುದಲ್ಲ, ಎಲ್ಲ ಗ್ರಾಮಪಂಚಾಯತ್ ಗಳಲ್ಲೂ, ನಗರಸಭೆಗಳಲ್ಲೂ ಗರಿಷ್ಠ ಮಟ್ಟದಲ್ಲಿ ಕೃಷಿ ನಡೆಸಲಾಗಿದೆ ಎಂಬುದು ಇಲ್ಲಿನ ಉದ್ದೇಶ ಎಂದವರು ತಿಳಿಸಿದರು. ಹೊಸ ಜಾಗದಲ್ಲಿ ಹೊಸ ಕೃಷಿಕ ಗುಂಪು ಸೃಷ್ಟಿ ಈ ಯೋಜನೆಯ ಲಕ್ಷ್ಯ. ಸಾಂಪ್ರದಾಯಿಕ ಕೃಷಿ ಶೈಲಿಯಲ್ಲಿ ಕೃಷಿಕರು ಮುಂದುವರಿಯುವುದರ ಜೊತೆಗೆ ಸುಭಿಕ್ಷ ಕೇರಳಂ ಎಂಬ ಬ್ರಾಂಡ್ ಹೆಸರಿನೊಂದಿಗೆ ಮಾತ್ರ ಕೃಷಿ ನಡೆಸಲಾಗುವುದು. ಕೃಷಿ ಸಂಬಂಧ ಚಟುವಟಿಕೆಗಳು ವಿವಿಧ ಇಲಾಖೆಗಳ ಹೆಸರಿನಲ್ಲಿ ನಡೆಸಬೇಕಾಗಿಲ್ಲ ಎಂದರು.
ಜಿಲ್ಲೆಯ ಎಲ್ಲ ಬಂಜರು ಭೂಮಿಗಳನ್ನು ಕೃಷಿಗೆ ಪೂರಕವಾಗಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ, ಇಲಾಖೆಗಳ, ಮಿಷನ್ ಗಳ ಚಟುವಟಿಕೆಗಳ ಏಕೀಕರಣ ಉದ್ದೇಶದಿಂದ ಜಿಲ್ಲಾ ಮಟ್ಟದ ಕೋರ್ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿ, ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಸಂಚಾಕರಾಗಿ, ವಿವಿಧ ಇಲಾಖೆಗಳ ಮುಖ್ಯಸ್ಥರು ಸಮಿತಿ ಸದಸ್ಯರಾಗಿದ್ದಾರೆ. ಮೃಷಿ, ಮೀನುಗಾರಿಕೆ, ಹೈನುಗಾರಿಕೆ, ಮೃಗಸಂರಕ್ಷಣೆ ಸಹಿತ ವಲಯಗಳ ಸಮಗ್ರ ಅಭಿವೃದ್ಧಿ ಲಕ್ಷ್ಯವಾಗಿರಿಸಿ ಕ್ರಿಯಾಯೋಜನೆ ಸಿದ್ಧಪಡಿಸಲು ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಮುಖ್ಯಸ್ಥ ರಿಗೆ ಜಿಲ್ಲಾಧಿಕಾರಿ ಆದೇಶಿಸಿದರು.

