ಕುಂಬಳೆ: ಅಬಕಾರಿ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ನಡೆಸುತ್ತಿರುವ ಚುರುಕಿನ ತಪಾಸಣೆಯ ಪರಿಣಾಮ ಎರಡು ದಿನಗಳಲ್ಲಿ 105 ಲೀ.ಹುಳಿರಸ, 17.28 ಕರ್ನಾಟಕದಲ್ಲಿ ತಯಾರಿಸಿದ ಮದ್ಯ, 500 ಗ್ರಾಂ ನಿಷೇ„ತ ಹೊಗೆಸೊಪ್ಪು ಉತ್ಪನ್ನಗಳನ್ನು ಪತ್ತೆ ಮಾಡಿ, ವಶಪಡಿಸಲಾಗಿದೆ. ಜಿಲ್ಲೆಯ ವಿವಿಧೆಡೆ ನಡೆಸಿದ ತಪಾಸಣೆಯಲ್ಲಿ ಕೊಡ್ಪಾ ಕಾಯಿದೆ ಪ್ರಕಾರ 1600 ರೂ. ದಂಡ ವಸೂಲಿ ಮಾಡಲಾಗಿದೆ. ಒಂದು ದ್ವಿಚಕ್ರ ವಾಹನ ವಶಪಡಿಸಲಾಗಿದೆ. 4 ಅಬಕಾರಿ ಕೇಸು, 11 ಕೊಡ್ಪಾ ಕಾಯಿದೆ ಪ್ರಕಾರ ಕೇಸುಗಳೂ ದಾಖಲಾಗಿವೆ.
ಕೊಳತ್ತೂರು ಗ್ರಾಮದ ಮುಂದಲ್ ಬಝಾರ್ ಕಾಲನಿಯಲ್ಲಿ 75 ಲೀ. ಹುಳಿರಸ ಪತ್ತೆಯಾಗಿದೆ. ಗೋಪಾಲನ್ ವಿರುದ್ಧ ಕೇಸು ದಾಖಲಾಗಿದೆ. ಏಳೇರಿ ಗ್ರಾಮದ ನಾಟೆಕಲ್ಲಿನಲ್ಲಿ 30 ಲೀ. ಹುಳಿರಸ ಪತ್ತೆಯಾಗಿದ್ದು, ಕೇಸು ದಾಖಲಿಸಲಾಗಿದೆ. ಕರಿವೇಡಗಂ ಮೂಡಂಕಯಂ ಎಂಬಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಅಕ್ರಮ ಸಾಗಾಟ ನಡೆಸುತ್ತಿದ್ದ 8.64 ಲೀ. ಕರ್ನಾಟಕದಲ್ಲಿ ತಯಾರಿಸಿದ ಮದ್ಯ ಪತ್ತೆಯಾಗಿದೆ. ಸಂತೋಷ್ ಜೋಸೆಫ್ ವಿರುದ್ಧ ಕೇಸು ದಾಖಲಿಸಲಾಗಿದೆ. ಕಾಸರಗೋಡು ನಗರದ ಬೀರಂತಬೈಲು ರೈಲ್ವೇ ಟ್ರ್ಯಾಕ್ ಬಳಿ 8.64 ಲೀ. ಕರ್ನಾಟಕ ನಿರ್ಮಿತ ಮದ್ಯ ಪತ್ತೆಯಾಗಿದೆ. ಮುಂದಿನ ದಿನಗಳಲ್ಲಿ ಅಬಕಾರಿ ಇಲಾಖೆ ತಪಾಸಣೆಯನ್ನು ಇನ್ನಷ್ಟು ಚುರುಕುಗೊಳಿಸಲಿದೆ ಎಂದು ಕಾಸರಗೋಡು ಸಹಾಯಕ ಅಬಕಾರಿ ಕಮೀಷನರ್ ಕೆ.ಕೆ.ಅನಿಲ್ ಕುಮಾರ್ ತಿಳಿಸಿದರು.


