ಉಪ್ಪಳ: ಸರ್ಕಾರ ಅಥವಾ ಖಾಸಗೀ ಒಡೆತನದ ಕೋಟ್ಯಂತರ ರೂ. ಯೋಜನೆಯೊಂದು ಜಗತ್ತಿನಲ್ಲೇ ಮಾನವೀಯತೆಯ ಕಾರಣದಿಂದ ತಾತ್ಕಾಲಿಕವಾಗಿ ನಿಲ್ಲಿಸಿದ್ದನ್ನು ಕೇಳಿದ್ದೀರಾ. ಹಾಗಾದರೆ ಅದು ನಡೆದಿದೆ. ಹಾಗೆಂದು ಎಲ್ಲೋ ಅಲ್ಲ. ಕಾಸರಗೋಡು ಗಡಿನಾಡಲ್ಲಿ!
ಮಂಜೇಶ್ವರ ತಾಲೂಕು ಪೈವಳಿಕೆ ಗ್ರಾ.ಪಂ. ಗಡಿಯಲ್ಲಿರುವ ಕೊಮ್ಮಂಗಳ ಎಂಬಲ್ಲಿ ಕೇರಳ ಸರ್ಕಾರದ 275 ಕೋಟಿ ರೂ.ಗಳ 50 ಮೆಗಾ ವಾಟ್ ಸಾಮಥ್ರ್ಯದ ಸೋಲಾರ್ ವಿದ್ಯುತ್ ಯೋಜನೆಯೊಂದು ಅನುಷ್ಟಾನಗೊಳ್ಳುತ್ತಿದೆ. ಕಾಮಗಾರಿ ಭರದಿಂದ ಸಾಗುತ್ತಿದ್ದು ಈ ಮಧ್ಯೆ ಇತ್ತೀಚೆಗೆ ಕಾಮಗಾರಿ ನಡೆಯುವಲ್ಲಿ ವಿಶೇಷವೆಂಬಂತೆ ಬೃಹತ್ ಹೆಬ್ಬಾವು ಮತ್ತು ಅದಿರಿಸಿರುವ 36 ಮೊಟ್ಟೆಗಳು ಕಂಡುಬಂದಿದ್ದು ವಿಷಯ ತಿಳಿದ ಕಾಸರಗೋಡು ವಿಭಾಗೀಯ(ಆರ್ ಎಫ್ ಓ) ಅರಣ್ಯಾಧಿಕಾರಿ ಆಗಮಿಸಿ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಿ ಹೆಬ್ಬಾವಿನ ಹೆರಿಗೆಗೆ ಅನುವು ಮಾಡಿಕೊಟ್ಟಿರುವುದು ಜಗತ್ತಿನಲ್ಲೇ ವಿಶಿಷ್ಟ ಮಾನವೀಯ ಮುಖದರ್ಶನಕ್ಕೆ ಸಾಕ್ಷಿಯಾಯಿತು.
ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಇಂತಹ ಹೃದಯ ವಿಶಾಲತೆಯ ಮೂಲಕ ಗಮನ ಸೆಳೆದರು. ಕಾಮಗಾರಿ ನಿಲ್ಲಿಸಿ ಹೆಬ್ಬಾವಿನ ಮೊಟ್ಟೆಗಳಿಗೆ ಹಾನಿಯಾಗದಂತೆ ಚದುರಿ ಬಿದ್ದಿದ್ದ ಕಲ್ಲು-ಮಣ್ಣುಗಳನ್ನು ಸರಿಸಿ ಸುಖವಾದ ಮೊಟ್ಟೆ ಬಿರಿಯುವಿಕೆಗೆ ವ್ಯವಸ್ಥೆ ಕಲ್ಪಿಸಿದರು. ಕಾಮಗಾರಿ ನಿಲುಗಡೆಗೊಂಡು 9ನೇ ದಿನ ತಾಯಿಯ ಎದುರಲ್ಲೇ ಮೊಟ್ಟೆಗಳು ಬಿರಿದು ಮರಿ ಹಾವುಗಳು ಹೊರಬಂದಿದ್ದು, ಬಳಿಕ ಅರಣ್ಯ ಇಲಾಖೆಯವರು ತಮ್ಮ ವಶವಿರಿಸಿ ಪರಿಪೋಶಿಸಿದರು. ಜೊತೆಗೆ ಜೂ.5 ರಂದು ಲೋಕ ಪರಿಸರ ದಿನದಂದು ಇಲಾಖೆ ರಕ್ಷಿತಾರಣ್ಯಕ್ಕೆ ತಾಯಿ-ಮಕ್ಕಳನ್ನು ಬಿಡುವ ಮೂಲಕ ಸಹಜ ವಾತಾವರಣ ಕಲ್ಪಿಸಿಕೊಡಲಾಯಿತು. ಈ ಮೂಲಕ ಅರಣ್ಯಾಧಿಕಾರಿಗಳೊಬ್ಬರು ಮಾನವ ಕುಲಕೋಟಿಗೆ ಮಾರ್ಗಪಂಕ್ತಿಯೊಂದು ನಿರ್ಮಿಸಿ ಕೊಟ್ಟಿರುವುದು ಭಾರೀ ಪ್ರಶಂಸೆಗೆ ಕಾರಣವಾಯಿತು. ಈ ಮೂಲಕ ಅಧಿಕಾರಿ ವರ್ಗಕ್ಕೆ ಬಿಗ್ ಸೆಲ್ಯೂಟ್ ನೀಡಲೇ ಬೇಕು.
ಹೆಬ್ಬಾವು ಹೇಗೆ ಬಂತು!:
ಕೊಮ್ಮಂಗಳ ಆಸುಪಾಸಿನ ಪರಿಸರದಲ್ಲಿ ಅತ್ಯಂತ ವಿಶಾಲವಾಗಿ ಹರಡಿರುವ ಬಯಲು ಪ್ರದೇಶ. ಇಲ್ಲಿ ನೂರಾರು ಗುಹೆ, ಸುರಂಗ, ಬಿಲಗಳು, ಬೃಹತ್ ಕಲ್ಲುಗಳು ಸಾಮಾನ್ಯ ದೃಶ್ಯ. ಜನವಸತಿ ರಹಿತವಾಗಿರುವ ಹೆಕ್ಟೇರ್ ಗಟ್ಟಲೆ ಬಯಲು ಪ್ರದೇಶ ಹಿಂದೆ ಗೋಮಾಳವಾಗಿ ಪ್ರಸಿದ್ದಪಡೆದಿತ್ತೆಂದು ಹಿರಿಯ ತಲೆಮಾರಿನ ನೆನಪು. ಕೊಮ್ಮಂಗಳದ ಒಂದು ಬದಿ ಕಾರಣಿಕದ ಕೊರತಿ ದೈವ, ಮತ್ತೊಂದೆಡೆ ಕೊಳಚಪ್ಪು ವನಶಾಸ್ತಾರ ದೇವರು,ಪಾಡಿ ಶ್ರೀಉಳ್ಳಾಲ್ತಿ-ದುರ್ಗಾ ಸನ್ನಿಧಿ, ಕಳಾಯಿ ಹೊಳೆಗಳಿಂದ ಪ್ರಾಕೃತಿಕ ರಮಣೀಯ ಸ್ಥಳ. ಒಂದೂವರೆ ದಶಕಗಳ ಹಿಂದೆ ಇಲ್ಲಿ ಹುಲಿ-ಚಿರತೆ, ಕಡವೆಗಳು ಕಂಡುಬರುತ್ತಿದ್ದವು. ಇಂತಹ ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೇ ಸೋಲಾರ್ ಪ್ಲಾಂಟ್ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿತ್ತು. ಆ ಸಂದರ್ಭ ಈ ಬಗ್ಗೆ ಪ್ರಕೃತಿ ಪ್ರೇಮಿಗಳು, ಸಮಾಜ ಸೇವಕರು ವಿರೋಧ ವ್ಯಕ್ತಪಡಿಸಿ ಪ್ರಕೃತಿ-ಜೀವ ವೈವಿಧ್ಯಕ್ಕೆ ತೊಂದರೆಯಾಗುವುದೆಂದು ಪ್ರತಿಭಟಿಸಿದ್ದರು. ಬಳಿಕ ಯೋಜನೆ ನೆನೆಗುದಿಗೆ ಬಿದ್ದು ಇದೀಗ ಮತ್ತೆ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ಹೆಬ್ಬಾವು ಸಹಿತ ವಿವಿಧ ಹಾವಿನ ಪ್ರಬೇಧಗಳು, ಹಂದಿ, ಕಾಡುಕೋಣ, ವಿವಿಧ ವರ್ಗದ ಪಕ್ಷಿಗಳು ಈಗಲೂ ಕಾಣಸಿಗುತ್ತವೆ.
ಅಭಿಮತ:
ಸಕಲ ಜೀವ ಜಾಲಗಳಿಗೆ ವಾಸ ಮಾಡಲು ಇರುವುದು ಒಂದೇ ಭೂಮಿ. ಆದರೆ ಇಲ್ಲಿ ಮನುಷ್ಯನ ಅತಿಯಾದ ಅಭಿವೃದ್ಧಿ ಕೆಲಸಗಳಿಂದ ಜೀವ ಜಂತುಗಳ ಆವಾಸ ವ್ಯವಸ್ಥೆ ನಾಶವಾಗುತ್ತಿದೆ.ಇದರಿಂದ ಮನುಷ್ಯನ ಈಗಾಗಲೇ ಪರಿತಪಿಸುತ್ತಿದ್ದಾನೆ. ಜೈವ ವೈವಿಧ್ಯತೆಯ ಸಂರಕ್ಷಣೆಗೆ ಇಂತಹ ಖಡಕ್ಕ್ ಆದೇಶಗಳು ಅಗತ್ಯವಾಗಿವೆ.
ರಾಜು ಕಿದೂರು
ಪಕ್ಷಿ ನಿರೀಕ್ಷಕ,ಕಾಸರಗೋಡು.
.....................................................................................................................................................................................
2)
ಪ್ರಕೃತಿಯ ಪ್ರತಿಯೊಂದು ಜೀವ ವೈವಿಧ್ಯತೆಗೂ ಮನುಷ್ಯನಷ್ಟೇ ಬದುಕುವ ಹಕ್ಕು ನಿಕ್ಷಿಪ್ತವಾಗಿದ್ದು ಈ ಹಿನ್ನೆಲೆಯಲ್ಲಿ ಹೆಬ್ಬಾವುಗಳನ್ನು ಸಂರಕ್ಷಿಸುವ ಮಹತ್ವವನ್ನು ಮನಗಂಡು ಸೋಲಾರ್ ಯೋಜನೆ ತಾತ್ಕಾಲಿಕ ತಡೆಗೆ ವಿನಂತಿಸಿದೆ. ಕಾಮಗಾರಿ ವಹಿಸಿದ್ದ ಗುತ್ತಿಗೆದಾರ ಸಂಪೂರ್ಣ ಸಹಕರಿಸಿದ್ದರಿಂದ ಇದು ಸಾಧ್ಯವಾಯಿತು. ಪ್ರಸ್ತುತ ರಕ್ಷಿತಾರಣ್ಯಕ್ಕೆ ಹಾವುಗಳನ್ನು ಬಿಡಲಾಗಿದೆ. 36 ಮೊಟ್ಟೆಗಳೊಡೆದು ಹೆಬ್ಬಾವು ಮರಿಗಳು ಯಶಸ್ವಿಯಾಗಿ ಈ ನೆಲದ ಬೆಳಕು ಕಾಣುವಂತಾದುದು ಸೌಭಾಗ್ಯ.
ಅನಿಲ್ ಕುಮಾರ್
ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ. ಇಂತಹ ವಿಶಿಷ್ಟ ಚಟುವಟಿಕೆಗೆ ಸಾರಥ್ರ್ಯ ನೀಡಿದ ಮಾನವೀಯ ಅಧಿಕಾರಿ.




